ಮಡಿಕೇರಿ, ಡಿ. 21: ದಿಡ್ಡಳ್ಳಿ ಆದಿವಾಸಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ಹಿತಾಸಕ್ತರು ಮತ್ತು ನಕ್ಸಲ್ ಮೂಲದ ಕೆಲವು ಪ್ರಮುಖರ ಚಲನ-ವಲನವನ್ನು ಗಮನಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಆರ್. ವಿನ್ಸೆಂಟ್ ಡಿಸೋಜಾ ಅವರು ಜಿಲ್ಲೆಯ ಎರಡು ಪಂಚಾಯಿತಿ ವ್ಯಾಪ್ತಿಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಇಂದು ಆದೇಶ ಹೊರಡಿಸಿದ್ದಾರೆ. ಈ ಪ್ರದೇಶಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಲ್ಲದೆ, ಪ್ರತಿಭಟನಾ ಸ್ಥಳದ ಸುತ್ತಮುತ್ತ ಹದ್ದುಗಣ್ಣಿನ ಸಿಸಿ ಟಿವಿ ಅಳವಡಿಸಲಾಗಿದೆ.

ಈ ಆದೇಶದ ಅನ್ವಯ ವೀರಾಜಪೇಟೆ ತಾಲೂಕಿನ ಚೆನ್ನಂಗಿ ಮತ್ತು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಇಂದು ಮಧ್ಯಾಹ್ನದಿಂದಲೇ ಜಾರಿಗೊಳ್ಳುವಂತೆ ತಾ. 24ರ ಬೆಳಿಗ್ಗೆ 6 ಗಂಟೆವರೆಗೆ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ನಿಷೇಧಾಜ್ಞೆ ಸಂದರ್ಭ ದಿಡ್ಡಳ್ಳಿಯಲ್ಲಿ ಪ್ರಸ್ತುತ ಬುಡಕಟ್ಟು ಜನಾಂಗದವರು ಆಶ್ರಯ ಪಡೆದ ಸ್ಥಳವಾದ ಆಶ್ರಮ ಶಾಲೆಯ ಸುತ್ತಮುತ್ತ ಹೊರಗಿನ ಯಾವದೇ ವ್ಯಕ್ತಿಗಳು ಪ್ರವೇಶಿಸದಂತೆ ನಿಷೇಧಿಸಲಾಗಿದೆ. ಅಲ್ಲಿ ವ್ಯಾಸ್ತವ್ಯ ಹೂಡಿರುವ ಬುಡಕಟ್ಟು ಜನಾಂಗ ಹೊರತುಪಡಿಸಿ ಇತರ ಯಾವದೇ ವ್ಯಕ್ತಿಗಳ ಪ್ರವೇಶಕ್ಕೆ ತಡೆಯೊಡ್ಡಲಾಗುವದು.

‘ಶಕ್ತಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ವಿನ್ಸೆಂಟ್ ಡಿಸೋಜಾ ಅವರು ದಿಡ್ಡಳ್ಳಿಯಲ್ಲಿ ಆಶ್ರಯ ಪಡೆದಿರುವ ಸ್ಥಳದಲ್ಲಿ

(ಮೊದಲ ಪುಟದಿಂದ) ಎಲ್ಲಾ ಕಡೆ ಸಿಸಿ ಟಿವಿಯನ್ನು ಅಳವಡಿಸಿರುವದಾಗಿ ತಿಳಿಸಿದರು. ಹೊರಗಿನ ವ್ಯಕ್ತಿಗಳ ಚಲನ-ವಲನವನ್ನು ಹದ್ದುಗಣ್ಣಿನಲ್ಲಿ ವೀಕ್ಷಿಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್.ವಿ. ಡಿಸೋಜಾ ಹಾಗೂ ಜಿಲ್ಲಾ ಪ್ರಬಾರ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜು ಗೌಡ ಇವರುಗಳು ‘ಶಕ್ತಿ’ಯೊಂದಿಗೆ ಮಾತನಾಡಿ ಇತ್ತೀಚೆಗೆ ಅಮಾಯಕರಾದ ಆದಿವಾಸಿಗಳನ್ನು ಪ್ರಚೋದಿಸಿ ಜಿಲ್ಲೆಯಲ್ಲಿ ಶಾಂತಿ ಕದಡುವ ನಿಟ್ಟಿನಲ್ಲಿ ಕೇರಳ ವಿಭಾಗದಿಂದಲೂ ನಕ್ಸಲ್ ಹಿನ್ನೆಲೆಯ ಅನೇಕ ವ್ಯಕ್ತಿಗಳು ಪ್ರವೇಶಿಸುತ್ತಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿಯಿತ್ತಿದೆ. ಆದಿವಾಸಿಗಳ ಶಾಂತಿಯುತ ಬೇಡಿಕೆಗೆ ಜಿಲ್ಲಾಡಳಿತ, ರಾಜ್ಯದ ಅನೇಕ ಸಚಿವರುಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಸ್ಪಂದಿಸುತ್ತಲೇ ಬಂದಿದ್ದಾರೆ. ನಿರಾಶ್ರಿತ, ನಿರ್ವವಸತಿಗ ಆದಿವಾಸಿಗಳಿಗೆ ಸೂಕ್ತ ವಸತಿ ಆಶ್ರಯ ಕಲ್ಪಿಸಲು, ಎಲ್ಲಾ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಈ ಬಗ್ಗೆ ಸಕ್ರಿಯವಾಗಿ ಕಾರ್ಯಾರಂಭ ಮಾಡಲಾಗಿದೆ. ಆದಿವಾಸಿಗಳು ತಮಗೆ ವಸತಿ ಸೌಲಭ್ಯ ಕಲ್ಪಿಸುವ ಸಕ್ರಿಯಶೀಲ ಆಶ್ವಾಸನೆಯನ್ನು ಒಪ್ಪಿಕೊಂಡಿದ್ದು, ಶಾಂತರಾಗಿಯೇ ವರ್ತಿಸಿದ್ದಾರೆ. ಆದರೆ, ಕೆಲವು ಆಸಕ್ತ ವ್ಯಕ್ತಿಗಳು ನಕ್ಸಲ್ ಮತ್ತಿತರ ಹಿನ್ನೆಲೆಯ ಮಂದಿ ಷಡ್ಯಂತ್ರ ನಡೆಸಿ ಜಿಲ್ಲೆಯಲ್ಲಿ ಆಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿರುವದು ಜಿಲ್ಲಾಡಳಿತಕ್ಕೆ ಸ್ಪಷ್ಟ ಗೋಚರವಾಗಿದೆ. ಇದರಿಂದಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಈ ನಡುವೆ ಚೆನ್ನಂಗಿ ಮತ್ತು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮದ್ಯ ವ್ಯಾಮೋಹಕ್ಕೆ ಒಳಗಾಗಿ ಆದಿವಾಸಿಗಳು ಅನಾರೋಗ್ಯಕ್ಕೆ ಒಳಗಾಗುವ ಹಾಗೂ ಅನವಶ್ಯಕ ಪ್ರಚೋದನೆಗೆ ಸಿಲುಕುವ ಅಪಾಯದಿಂದ ಪಾರು ಮಾಡಲು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಖಚಿತ ಪಡಿಸಿದರು.

ಗುಂಪುಗಾರಿಕೆ ಪತ್ತೆ

ಈ ನಡುವೆ ದಿಡ್ಡಳ್ಳಿಯ ರಕ್ಷಿತಾರಣ್ಯದಲ್ಲಿ ಮೊದಲಿನಿಂದಲೂ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಿದ್ದ ನಿವಾಸಿಗಳಿಗೂ ಇತ್ತೀಚೆಗೆ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದ ಬುಡಕಟ್ಟು ಜನಾಂಗದ ಮಂದಿಯ ನಡುವೆ ಭಿನ್ನಾಭಿಪ್ರಾಯ ಮೂಡಿರುವರು ಪತ್ತೆಯಾಗಿದೆ. ಇದರಿಂದಾಗಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆಯಾಗಿದೆ. ಮಕ್ಕಳು ಶಾಲೆಗೆ ತೆರಳಲು ಕೂಡ ತೊಡಕುಯುಂಟಾಗಿದೆ. ಎರಡು ಗುಂಪುಗಳ ಮಧ್ಯೆ ಗಲಭೆ ನಡೆದು, ಕಾನೂನು ಸುವ್ಯವಸ್ಥೆಗೆ ಧಕ್ಕೆವುಂಟಾಗುವ ಸಾಧ್ಯತೆ ಇದೆ. ಅಲ್ಲದೇ ಬೇರೆ ಕಡೆಯ ವ್ಯಕ್ತಿಗಳು ತಮಗೆ ಅವ್ಯಶಕತೆ ಇಲ್ಲದಿದ್ದರು ಯಾವದೋ ಲಾಭ ಪಡೆಯುವ ಸಲುವಾಗಿ ಹಾಗೂ ತಮ್ಮ ಕಾರ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಪ್ರತಿಭಟನಾಕಾರರಿಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಹಾದಿ ತಪ್ಪಿಸುತ್ತಿರುವದು ಗಮನಕ್ಕೆ ಬಂದಿದೆ ಎಂದು ಜಿಲ್ಲಾಧಿಕಾರಿ ಮತ್ತು ಎಸ್‍ಪಿ ತಿಳಿಸಿದ್ದಾರೆ.

ಕೇರಳದ ಸುಮಾರು 10ಮಂದಿ ನಕ್ಸಲರು ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತಮ್ಮ ನಕ್ಸಲ್ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳಲು ದಿಡ್ಡಳ್ಳಿಯ ಪ್ರತಿಭಟನಾಕಾರರನ್ನು ಜೊತೆಗೆ ಸೇರಿಸಿಕೊಳ್ಳುವ ಸಾಧ್ಯತೆ ಬಗ್ಗೆಯೂ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಎಲ್ಲಾ ಹಿನ್ನೆಲೆಗಳಿಂದಲೂ ನಿಷೇಧಾಜ್ಞೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದರು.

ಜನಾಂಗದ ದುರ್ಬಳಕೆ, ಜಿಲ್ಲೆಯ ಆಂತರಿಕ ಭದ್ರತೆಗೆ ಧಕ್ಕೆ ಹಾಗೂ ಕಾನೂನು ಸುವ್ಯವಸ್ಥೆ ಧಕ್ಕೆ ಈ ಮೂರು ಕಾರಣಗಳಿಂದ ನಿಷೇಧಾಜ್ಞೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿಯಿತ್ತರು.