ಮಡಿಕೇರಿ, ಜ. 7: ಮಾಲ್ದಾರೆ ಸನಿಹದ ದಿಡ್ಡಳ್ಳಿ ಗಿರಿಜನರ ತಾತ್ಕಾಲಿಕ ಶಿಬಿರಕ್ಕೆ ಕಳೆದ ಡಿ. 22 ಮತ್ತು 23 ರಂದು ಸೆಕ್ಷನ್ 144ರ ಪ್ರತಿಬಂಧ ಕಾಜ್ಞೆಯನ್ನು ಉಲ್ಲಂಘಿಸಿ ಕೆಲವು ಪ್ರಮುಖ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿದ್ದಾರೆ, ಪ್ರಚೋದನೆಗೈದಿದ್ದಾರೆ ಎನ್ನುವ ಲಿಖಿತ ದೂರನ್ನು ಇಂದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನೀಡಲಾಗಿದೆ.

ಕಾವೇರಿ ಸೇನೆ ಸಂಘಟನೆಯ ಪರವಾಗಿ ಪ್ರಧಾನ ಸಂಚಾಲಕ ಕೆ.ಎ. ರವಿಚಂಗಪ್ಪ ಅವರು ಈ ದೂರು ಸಲ್ಲಿಸಿದ್ದಾರೆ. ಅವರ ದೂರಿನನ್ವಯ ಡಿ. 22 ಮತ್ತು 23 ರಂದು ಮಾಜಿ ವಿಧಾನ ಪರಿಷತ್ ಸದಸ್ಯ ಎ.ಕೆ. ಸುಬ್ಬಯ್ಯ ಹಾಗೂ ಬೆಂಗಳೂರಿನ ಚಿತ್ರನಟ ಚೇತನ್ ಮತ್ತು ಸುಮಾರು 50 ಮಂದಿ ಕಾನೂನು ವಿರೋಧಿಸಿ ದಿಡ್ಡಳ್ಳಿಯ ಗಿರಿಜನ ತಾತ್ಕಾಲಿಕ ವಸತಿ ಕೇಂದ್ರಕ್ಕೆ ಅತಿಕ್ರಮ ಪ್ರವೇಶಿಸಿದ್ದಾರೆ. ಈ ಪ್ರದೇಶವು ಮೀಸಲು ಅರಣ್ಯಕ್ಕೆ ಒಳಪಟ್ಟಿದ್ದು, ಜಿಲ್ಲಾಧಿಕಾರಿಯವರು ಸೆಕ್ಷನ್ 144ನ್ನು ಜಾರಿಗೊಳಿಸಿದ್ದರೂ ಅದನ್ನು ಉಲ್ಲಂಘಿಸಿ ಈ ಗುಂಪು ಅಲ್ಲಿಗೆ ಪ್ರವೇಶಿಸಿದೆ. ಪ್ರಮುಖರು ಕರ್ನಾಟಕ ಸರಕಾರ ಮತ್ತು ಅರಣ್ಯ ಇಲಾಖೆಯ ವಿರುದ್ಧ ಘೋಷಣೆ ಗಳನ್ನು ಕೂಗುತ್ತಾ, ಅರಣ್ಯಾಧಿಕಾರಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಕಾನೂನು ಭಂಗದ ವಿರುದ್ಧ ಪೊಲೀಸರು ಸೆಕ್ಷನ್ 141 ಮತ್ತು 142ರ ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಲಾಗಿದೆ.

ಎಸ್ಪಿ ಪ್ರತಿಕ್ರಿಯೆ: ಈ ದೂರಿನ ಕುರಿತು ಜಿಲ್ಲಾ ಪ್ರಬಾರ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಗೌಡ ಅವರನ್ನು ‘ಶಕ್ತಿ’ ಪ್ರಶ್ನಿಸಿದಾಗ ದೂರಿನಲ್ಲಿ ತಿಳಿಸಿರುವದನ್ನು ಪರಿಶೀಲಿಸಿದಾಗ ಡಿ. 23 ರಂದು ಸೆಕ್ಷನ್ 144ನ್ನು ಸಡಿಲಗೊಳಿಸಲಾಗಿತ್ತು. ಅಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಅವರು ದಿಡ್ಡಳ್ಳಿ ಪ್ರದೇಶಕ್ಕೆ ಆಗಮಿಸಿದುದರಿಂದ ಜಿಲ್ಲಾಧಿಕಾರಿಯವರು ಈ ಕ್ರಮ ಕೈಗೊಂಡಿದ್ದರು ಎಂದು ಮಾಹಿತಿಯಿತ್ತರು.

ಡಿ. 22 ರಂದು ಸೆಕ್ಷನ್ ಜಾರಿಯಲ್ಲಿದ್ದು, ಆ ದಿನವೇನಾದರೂ ದೂರಿನಲ್ಲಿ ತಿಳಿಸಿರುವಂತೆ ಕಾನೂನು ಭಂಗವಾಗಿದ್ದರೆ, ಸಿಸಿಟಿವಿ ದೃಶ್ಯಾವಳಿಯನ್ನು ಕುಲಂಕಷವಾಗಿ ಪರಿಶೀಲಿಸಿ ಬಳಿಕ ಮುಂದಿನ ಕ್ರಮಕೈಗೊಳ್ಳುವಂತೆ ಸಿದ್ದಾಪುರ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಅವರಿಗೆ ನಿರ್ದೇಶನ ನೀಡಿರುವದಾಗಿ ಎಸ್ಪಿ ಮಾಹಿತಿಯಿತ್ತರು.