ಮಡಿಕೇರಿ, ಡಿ. 23: ದಿಡ್ಡಳ್ಳಿ ಹಾಡಿಯಲ್ಲಿನ ಆದಿವಾಸಿಗಳ ಮನೆ ತೆರವು ಪ್ರಕರಣ ಇಂದು ಮತ್ತೊಂದು ರೀತಿಯಲ್ಲಿ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತು. ದಿಡ್ಡಳ್ಳಿ ಹಾಡಿಯ ನಿವಾಸಿಗಳ ಪ್ರತಿಭಟನೆಗೆ ರಾಜ್ಯದ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸುವದ ರೊಂದಿಗೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಡಿಕೇರಿ ಚಲೋ ಪ್ರತಿಭಟನೆಯ ಮೂಲಕ ತೆರವು ಪ್ರಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಸಂತ್ರಸ್ಥರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹಾಗೂ ವಿವಿಧ ಬೇಡಿಕೆಗಳ ಮೂಲಕ ಆದಿವಾಸಿಗಳು ಹಾಗೂ ದಲಿತರ ವಿರುದ್ಧದ ಶೋಷಣೆಯ ವಿರುದ್ಧವಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಕರ್ನಾಟಕದ ಎಲ್ಲಾ

(ಮೊದಲ ಪುಟದಿಂದ) ಪ್ರಗತಿಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆದಿವಾಸಿ ಹಾಗೂ ದಲಿತ - ದಮನಿತರ ಸಂಕಲ್ಪ ಸಮಾವೇಶವಾಗಿ ಮಡಿಕೇರಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದಿಡ್ಡಳ್ಳಿ ಘಟನೆ ನಡೆದ ದಿನದಿಂದಲೂ ಆದಿವಾಸಿಗಳ ಪರವಾಗಿ ಹೋರಾಟ ನಡೆಸುತ್ತಿರುವವರೊಂದಿಗೆ ರಾಜ್ಯದ ವಿವಿಧ ಸಂಘಟನೆಗಳ ಪ್ರಮುಖರು, ಸದಸ್ಯರು ಮಡಿಕೇರಿಗೆ ಆಗಮಿಸಿದ್ದರು.

ನಗರದ ಗದ್ದುಗೆಯಿಂದ ಸಂಕಲ್ಪ ಮೆರವಣಿಗೆ ನಡೆಸಿ ಬಳಿಕ ಗಾಂಧಿಮೈದಾನದಲ್ಲಿ ಸಂಕಲ್ಪ ಸಮಾವೇಶ ನಡೆಯಿತು. ಮೆರವಣಿಗೆಗೆ ವಿಚಾರ ತಜ್ಞರಾದ ಧಾರವಾಡದ ಗಣೇಶ್ ದೇವಿ ಹಾಗೂ ಸುರೇಖಾ ದೇವಿ ಚಾಲನೆ ನೀಡಿದರು. ವಿವಿಧ ಸಂಘಟನೆಗಳ ಬ್ಯಾನರ್, ಧ್ವಜ, ಭಿತ್ತಿ ಪತ್ರದ ಮೂಲಕ ಆಕ್ಷೇಪದೊಂದಿಗೆ ವಿವಿಧ ಘೋಷಣೆಗಳ ಮೂಲಕ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ನೂರಾರು ಮಂದಿ ಮೆರವಣಿಗೆ ನಡೆಸಿದರು. ಮಂಡ್ಯದ ಮಹಿಳಾ ನಗಾರಿ ತಂಡ ನಗಾರಿ ಬಾರಿಸುತ್ತಾ ಮುಂಚೂಣಿಯಲ್ಲಿ ಸಾಗಿತು. ಗಾಂಧಿ ಮೈದಾನದಲ್ಲಿ ಜಮಾವಣೆಗೊಂಡ ಆದಿವಾಸಿಗಳು ದಿಡ್ಡಳ್ಳಿ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರರು ಸಾಮೂಹಿಕ ವಾಗಿ ಹಲವಾರು ಕ್ರಾಂತಿಗೀತೆಗಳ ಮೂಲಕ ಪ್ರತಿಭಟನೆ ಮುಂದು ವರಿಸಿದರು. ಈ ನಡುವೆ ರಾಜ್ಯ ಸಮಾಜ ಕಲ್ಯಾಣ ಸಚಿವ ಆಂಜನೇಯ ನೇತೃತ್ವದಲ್ಲಿ ಕೋಟೆ ಆವರಣದಲ್ಲಿ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರ ಸಭೆ ನಡೆಯುತ್ತಿತ್ತು.

ಕೆಲವು ಪ್ರಮುಖರು ನಿರ್ದಿಷ್ಟ ಬೇಡಿಕೆಗಳ ಮೂಲಕ ಸಭೆಯಲ್ಲಿ ಭಾಗವಹಿಸಿರುವ ಕುರಿತು ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದವರಿಗೆ ಇತರ ಪ್ರಮುಖರು ಮಾಹಿತಿ ನೀಡಿದರು. ಸಮಾವೇಶದಲ್ಲಿ ಹಾಜರಿದ್ದ ಹೋರಾಟ ಪ್ರಮುಖ ನೂರ್ ಶ್ರೀಧರ್ ಹಾಗೂ ಇನ್ನಿತರ ಪ್ರಮುಖರ ಉಪಸ್ಥಿತಿಯಲ್ಲಿ ಸಭೆಯನ್ನು ತಡವಾಗಿ ಆರಂಭಿಸಲಾಯಿತು.

ನೂರ್ ಶ್ರೀಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಡೆದ ಘಟನೆ ಹಾಗೂ ಸಮಿತಿಯ ಬೇಡಿಕೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಹೋರಾಟಕ್ಕೆ ಯಶಸ್ಸು ಸಿಗುವ ತನಕವೂ ಹೋರಾಟವನ್ನು ಮುಂದುವರಿಸುವ ಕುರಿತು ಅವರು ಈ ಸಂದರ್ಭ ಘೋಷಿಸಿದರು. ಒಂದು ವೇಳೆ ಸಮಾಜ ಕಲ್ಯಾಣ ಸಚಿವರು ನಡೆಸಿದ ಮಾತುಕತೆಯಲ್ಲಿ ಬೇಡಿಕೆಗೆ ಒಪ್ಪಿಗೆ ಸಿಗದಿದ್ದ ಪಕ್ಷದಲ್ಲಿ ಗಾಂಧಿ ಮೈದಾನ ಬಿಟ್ಟು ಕದಲದಿರುವಂತೆಯೂ ನಿರ್ಣಯ ಕೈಗೊಳ್ಳಲಾಗಿತ್ತು.

ಸಭೆಯ ನಡುವೆ ಮಾತುಕತೆಗೆ ತೆರಳಿದ್ದ ಮುಖಂಡರ ಆಗಮನವಾಯಿತು. ಆ ತನಕ ಸಭೆಯನ್ನು ಉದ್ಘಾಟಿಸಿರಲಿಲ್ಲ. ಬಳಿಕ ಎ.ಕೆ. ಸುಬ್ಬಯ್ಯ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ತಮ್ಮ ಭಾಷಣದಲ್ಲಿ ಸಭೆಯಲ್ಲಿ ಆದ ತೀರ್ಮಾನದ ಕುರಿತು ಸುಬ್ಬಯ್ಯ ಅವರು ವಿವರ ನೀಡಿದರು. ಇದಾದ ಬಳಿಕವೂ ಪ್ರಮುಖರಿಂದ ಮಾತಿನೊಂದಿಗೆ ಸಭೆ ಸಂಜೆ ತನಕವೂ ಮುಂದುವರಿಯಿತು.