ಮಡಿಕೇರಿ, ಡಿ. 21 : ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಅಮಾನವೀಯ ರೀತಿಯಲ್ಲಿ ಒಕ್ಕಲೆಬ್ಬಿಸಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ, ದಿಡ್ಡಳ್ಳಿ ವ್ಯಾಪ್ತಿಯಲ್ಲಿರುವ ಬಂಡವಾಳಶಾಹಿಗಳ ಅಕ್ರಮ ಜಾಗ ಒತ್ತುವರಿಯನ್ನು ತೆರವು ಗೊಳಿಸಬೇಕು ಮತ್ತು ನಿರಾಶ್ರಿತರಿಗೆ ನಿವೇಶನವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಒತ್ತಾಯಿಸಿದರು.

ಆದಿವಾಸಿಗಳ ವಿಚಾರದಲ್ಲಿ ಯಾರೂ ರಾಜಕಾರಣ ಮಾಡ ಬಾರದೆಂದ ಅವರು ಅಮಾನವೀಯ ರೀತಿಯಲ್ಲಿ ಕಾರ್ಯಾಚರಣೆÉ ನಡೆಸಿ ಗುಡಿಸಲುಗಳನ್ನು ನೆಲಸಮಗೊಳಿಸಿ ರುವದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರ ಶೇಖರ್ ಮಾತನಾಡಿ, ದಿಡ್ಡಳ್ಳಿಯಲ್ಲಿ ಆದಿವಾಸಿ ಮಹಿಳೆ ಬೆತ್ತಲೆ ಪ್ರತಿಭಟನೆ ನಡೆಸಿರುವದರಿಂದ ಇಡೀ ಸಮಾಜವೇ ಬೆತ್ತಲಾಗಿದೆಯೆಂದು ಮಾರ್ಮಿಕವಾಗಿ ನುಡಿದರು. ನಿರಾಶ್ರಿತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯ ನೀಡಬೇಕೆಂದು ಕುಸುಮಾವತಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಬಿ.ಸಿ. ಬೋರಯ್ಯ, ಸಂಚಾಲಕ ಪಾರ್ಮಲೆ ಎಂ. ಗಣೇಶ್, ಕಾರ್ಮಿಕ ಸಮಿತಿ ಅಧ್ಯಕ್ಷ ವಿಜಯ ಹಾಗೂ ಸಹ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು.