ಮಡಿಕೇರಿ, ಡಿ. 17: ದಿಡ್ಡಳ್ಳಿಯಲ್ಲಿ ನಿರಾಶ್ರಿತವಾಗಿರುವ 577 ಗಿರಿಜನ ಕುಟುಂಬಗಳಿಗೆ ನಿವೇಶನ ದೊರಕಿಸಿ ಕೊಡುವದಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಟವನ್ನು ರೂಪಿಸಲು ಡಿ.18 ರಂದು ನಿರಾಶ್ರಿತರು ಧರಣಿ ನಡೆಸುತ್ತಿರುವ ಪ್ರದೇಶದಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ‘ಸಂಕಲ್ಪ ಸಭೆ’ ನಡೆಸಲು ಭೂಮಿ ಮತ್ತು ವಸತಿ ಹೋರಾಟ ಸಮಿತಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಸಿರಿಮನೆ ನಾಗರಾಜು ಮೂರು ಹಕ್ಕೋತ್ತಾಯ ಗಳ ಮೂಲಕ ಮುಂದಿನ ಹೋರಾಟದ ಬಗ್ಗೆ ‘ಸಂಕಲ್ಪ ಸಭೆ’ ಯಲ್ಲಿ ಚಿಂತನೆ ನಡೆಸಲಾಗುವದೆಂದು ತಿಳಿಸಿದರು.
ಅರಣ್ಯ ಇಲಾಖೆಯ ಕಾರ್ಯಾ ಚರಣೆಯಿಂದ ಗುಡಿಸಲುಗಳನ್ನು ಕಳೆದುಕೊಂಡ ಆದಿವಾಸಿಗಳಿಗೆ ಅದೇ ಪ್ರದೇಶದಲ್ಲಿ ನಿವೇಶನ ಮಂಜೂರು ಮಾಡಬೇಕು, ರಾಜ್ಯದ ಎಲ್ಲಾ ಆದಿವಾಸಿಗಳಿಗೆ ಆದಿವಾಸಿ ಅರಣ್ಯ ಹಕ್ಕು ಮಸೂದೆಯಡಿ ಭೂಮಿಯ ಹಕ್ಕನ್ನು ನೀಡಬೇಕು ಹಾಗೂ ಅನಾದಿ ಕಾಲದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎನ್ನುವ ಒತ್ತಾಯವನ್ನು ಸಭೆಯಲ್ಲಿ ಮಂಡಿಸಲಾಗುವದೆಂದು ಸಿರಿಮನೆ ನಾಗರಾಜು ಹೇಳಿದರು.
ಸುಮಾರು 3 ಸಾವಿರ ಮಂದಿಯನ್ನು ಕಸದ ರಾಶಿಯಂತೆ ಅಮಾನವೀಯ ರೀತಿಯಲ್ಲಿ ಜೆಸಿಬಿ ಬಳಸಿ ಬೀದಿಪಾಲು ಮಾಡಿರುವದು ಕರ್ನಾಟಕ ರಾಜ್ಯದಲ್ಲಿ ಇದೇ ಪ್ರಥಮವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಅಧ್ಯಕ್ಷತೆಯಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ದೌರ್ಜನ್ಯ ನಡೆಸುತ್ತಿದೆಯೆಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳ ಮೇಲೆ ತೀವ್ರ ಒತ್ತಡವಿರುವಂತೆ ಕಂಡು ಬರುತ್ತಿದ್ದು, ನಿರಾಶ್ರಿತರ ಬಗ್ಗೆ ಕೇಳಲಾಗುವ ಯಾವದೇ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಗಳು ಮೌನವನ್ನಷ್ಟೆ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿದರು. ನಿರಾಶ್ರಿತರಿಗೆ ಮನೆ ಒದಗಿಸುವವರೆಗೆ ನಾವು ಮನೆಗೆ ತೆರಳುವದಿಲ್ಲವೆಂದು ತಿಳಿಸಿದ ಸಿರಿಮನೆ ನಾಗರಾಜು, ಭಾನುವಾರ ಬೆಳಗ್ಗೆ 10.30 ಕ್ಕೆ ನಡೆಯುವ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್, ಶ್ರೀಧರ್ ಸೇರಿದಂತೆ 60 ಕ್ಕೂ ಹೆಚ್ಚಿನ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಆದಿವಾಸಿಗಳಿಗೆ ಆಶ್ರಯ ಕಲ್ಪಿಸಲು ಅಗತ್ಯ ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳದಿದ್ದಲ್ಲಿ ರಾಜ್ಯ ವ್ಯಾಪಿ ಕೊಡಗು ಚಲೋ ಹೋರಾಟಕ್ಕೆ ಕರೆ ನೀಡುವದಾಗಿ ಅವರು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಮಾತನಾಡಿ, ಡಿಡ್ಡಳ್ಳಿಯಲ್ಲಿ ಗುಡಿಸಲುಗಳನ್ನು ಕಳೆದುಕೊಂಡವರು ಕಳೆÉದ ಅನೇಕ ವರ್ಷಗಳಿಂದ ಇದೇ ಪ್ರದೇಶದಲ್ಲಿ ನೆಲೆಸಿದ್ದ ಮೂಲ ನಿವಾಸಿಗಳು ಎನ್ನುವದಕ್ಕೆ ಸಾಕಷ್ಟು ಸಾಕ್ಷ್ಯಾಧಾರ ಗಳಿವೆ. ಕಾರ್ಮಿಕರಾಗಿ ಹೊಟ್ಟೆಪಾಡಿ ಗಾಗಿ ದುಡಿಯಲು ಹೋದವರು ಮತ್ತೆ ಬಂದು ಈ ಪ್ರದೇಶದಲ್ಲಿ ನೆಲೆ ಕಂಡುಕೊಳ್ಳಲು ಗುಡಿಸಲುಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಅರಣ್ಯ ಇಲಾಖೆÉ ಹಾಗೂ ಕಂದಾಯ ಇಲಾಖೆ ಪಿತೂರಿ ನಡೆಸಿ 577 ಕುಟುಂಬಗಳ ಗುಡಿಸಲುಗಳನ್ನು ನಾಶ ಮಾಡಿವೆ. ಗುಡಿಸಲುಗಳಿದ್ದ ಪ್ರದೇಶವನ್ನು ಆರ್ಟಿಸಿಯಲ್ಲಿ ಅರಣ್ಯ ಪೈಸಾರಿ ಎಂದು ನಮೂದಿಸಲಾಗಿದೆ. ಆದರೆ, ಅರಣ್ಯ ಇಲಾಖೆ ಇದನ್ನು ಮೀಸಲು ಅರಣ್ಯವೆಂದು ಹೇಳಿಕೊಂಡು ಬಂದಿದೆ. ವ್ಯವಸಾಯಕ್ಕೆ ಯೋಗ್ಯವಾಗಿಲ್ಲದ ಭೂಮಿಯನ್ನು ಮರಗಳನ್ನು ಬೆಳೆಸುವದಕ್ಕಾಗಿ ಅರಣ್ಯ ಇಲಾಖೆಯ ಉಸ್ತುವಾರಿಗೆ ಕಂದಾಯ ಇಲಾಖೆ ವರ್ಗಾವಣೆ ಮಾಡಿದ ಭೂಮಿ ಇದಾಗಿದೆಯೆಂದು ಎ.ಕೆ. ಸುಬ್ಬಯ್ಯ ಸ್ಪಷ್ಟನೆ ನೀಡಿದರು.
ಅರಣ್ಯ ಪೈಸಾರಿ ಎನ್ನುವ ವ್ಯಾಖ್ಯಾನವೆ ಇಲ್ಲವೆಂದು ವಾದಿಸಿದ ಅವರು, ಅರಣ್ಯ ಇಲಾಖೆಗೆ ಈ ಜಾಗದ ಮಾಲೀಕತ್ವವನ್ನು ನೀಡಿಲ್ಲವೆಂದರು. ಅರಣ್ಯ ಇಲಾಖೆ ಯಲ್ಲಿ ಜನವಿರೋಧಿ ಅಧಿಕಾರಿಗಳಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾದಿ ತಪ್ಪಿಸುತ್ತಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಜಿಲ್ಲಾಧಿಕಾರಿ ಜನ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ ಎ.ಕೆ. ಸುಬ್ಬಯ್ಯ, ಜಿಲ್ಲಾಡಳಿತದೊಂದಿಗೆ ನಾವು ಭಿಕ್ಷೆ ಬೇಡುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ.
ಕಂದಾಯ ಸಚಿವರು ನಿರಾಶ್ರಿತರು ಇದ್ದ ಸ್ಥಳದಲ್ಲೆ ನಿವೇಶನ ನೀಡುತ್ತೇವೆ ಎಂದಿರುವದು ಸ್ವಾಗತಾರ್ಹ. ಆದರೆ, ಹಕ್ಕುಪತ್ರದೊಂದಿಗೆ ಫಲಾನುಭವಿಗಳಿಗೆ ಆರ್ಟಿಸಿಯನ್ನು ಕೂಡ ನೀಡಬೇಕೆಂದು ಒತ್ತಾಯಿಸಿದ ಅವರು, ಹೀಗಾದಾಗ ಮಾತ್ರ ಅರಣ್ಯ ಇಲಾಖೆ ಸೃಷ್ಟಿಸುವ ಉಸಿರುಗಟ್ಟಿಸುವ ವಾತಾವರಣದಿಂದ ಆದಿವಾಸಿಗಳನ್ನು ಮುಕ್ತರನ್ನಾಗಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಆರ್ಟಿಸಿಯಲ್ಲಿ ರುವ ಅರಣ್ಯ ಪೈಸಾರಿ ಎನ್ನುವ ವ್ಯಾಖ್ಯಾನವನ್ನು ಬಿಟ್ಟು ಪೈಸಾರಿ ಎಂದು ಮಾತ್ರ ನಮೂದಿಸಿ ಜಾಗವನ್ನು ಅರ್ಹ ಫಲಾನುಭವಿಗಳಿಗೆ ಹಂಚಬೇಕೆಂದು ಒತ್ತಾಯಿಸಿದರು.
ಆದಿವಾಸಿ ಅರಣ್ಯ ಹಕ್ಕು ಕಾಯ್ದೆಯನ್ನು ವಿಫಲಗೊಳಿಸಲು ಅರಣ್ಯ ಅಧಿಕಾರಿಗಳು ಹಾಗೂ ಪರಿಸರವಾದಿಗಳು ಪಿತೂರಿ ನಡೆಸಿದ್ದಾರೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು.
ಚಿತ್ರನಟ ಚೇತನ್ ಮಾತನಾಡಿ, ಬೆಳ್ಳಿ ಪರದೆಯ ಮೇಲಿನ ಹೀರೋಗಳು ನಿಜ ಜೀವನದಲ್ಲಿ ಶೋಷಿತರ ಪರವಾಗಿ ಕೆಲಸ ಮಾಡುವ ಮೂಲಕ ಹೀರೋಗಳಾಗಬೇಕೆಂದರು. ಮೂರು ವರ್ಷಗಳ ಹಿಂದೆ ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಅಹಿಂದ ಪರ ಮುಖ್ಯಮಂತ್ರಿ ಎನ್ನುವ ಭಾವನೆ ಇತ್ತು. ಆದರೆ, ಇಂದು ಸರ್ಕಾರವೆ ಶೋಷಣೆಯಲ್ಲಿ ತೊಡಗಿದೆ. ಶುಕ್ರವಾರ ಜಿಲ್ಲೆಗಾಗಮಿಸಿದ ನಾಲ್ವರು ಸಚಿವರು ನಿರಾಶ್ರಿತರನ್ನು ಭೇಟಿಯಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ಸಾಕಷ್ಟು ಜಾಗ ಒತ್ತುವರಿಯಾಗಿದ್ದು, ಶ್ರೀಮಂತರಿಗೆ ‘ಸ್ಟೇ’ ಎನ್ನುವ ಅಸ್ತ್ರ ಬಳಸಿ ರಕ್ಷಣೆ ನೀಡಲಾಗುತ್ತಿದೆ. ಆದರೆ, ದಿಡ್ಡಳ್ಳಿಯಂತಹ ದುರ್ಬಲರ ಗುಡಿಸಲುಗಳನ್ನು ನಾಶಪಡಿಸ ಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಪಿಐಎಂಎಲ್ ಪಕ್ಷದ ನಿರ್ವಾಣಪ್ಪ ಮಾತನಾಡಿ, ದಿಡ್ಡಳ್ಳಿ ಗಿರಿಜನರ ಪರ ಹೋರಾಟ ನಡೆಸುತ್ತಿರುವ ಅಪ್ಪಾಜಿ ಹಾಗೂ ಮುತ್ತಮ್ಮ ಅವರುಗಳ ವಿರುದ್ಧ ಹೇಳಿಕೆ ನೀಡಿರುವ ಬುಡಕಟ್ಟು ಜನರ ಸಮನ್ವಯ ಸಮಿತಿಯ ಪದಾಧಿಕಾರಿ ಗಳು ಇಲ್ಲಿಯವರೆಗೆ ದಿಡ್ಡಳ್ಳಿಗೆ ಭೇಟಿ ನೀಡಿಲ್ಲ. ಯಾರದೋ ಪ್ರಚೋದನೆಗೆ ಒಳಗಾಗಿ ಅವರು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. ಗಿರಿಜನರನ್ನು ಬೀದಿಪಾಲು ಮಾಡಿರುವವರ ವಿರುದ್ಧ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕೊಳ್ಳಬೇಕೆಂದು ಒತ್ತಾಯಿಸಿದರು.
ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ಆದಿವಾಸಿ ಗಳನ್ನು ಒಕ್ಕಲೆಬ್ಬಿಸುವ ಮೊದಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತೆಂದು ಅಭಿಪ್ರಾಯಪಟ್ಟರು. ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವಿನ ದ್ವಂದ್ವ ದೂರವಾಗಬೇಕೆಂದರು.
ಬೆತ್ತಲೆ ಪ್ರತಿಭಟನೆ: ಹೋರಾಟಗಾರ್ತಿ ಜೇನು ಕುರುಬರ ಮುತ್ತಮ್ಮ ಮಾತನಾಡಿ, ಗುಡಿಸಲುಗಳನ್ನು ಉಳಿಸಿಕೊಳ್ಳುವ ದಕ್ಕಾಗಿ ತಾನು ಮಾಡಿದ ಬೆತ್ತಲೆ ಹೋರಾಟಕ್ಕೂ ಪ್ರತಿಫಲ ಸಿಕ್ಕಲಿಲ್ಲ ವೆಂದು ಬೆÉೀಸರ ವ್ಯಕ್ತಪಡಿಸಿದರು. ಹೋರಾಟಗಾರರನ್ನು ಜೈಲಿಗೆ ತಳ್ಳುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಆದರೆ, ನಿರಾಶ್ರಿತರಿಗೆ ಭೂಮಿಯ ಹಕ್ಕು ಸಿಕ್ಕುವಲ್ಲಿಯವರೆಗೆ ತಮ್ಮ ಹೋರಾಟ ನಿಲ್ಲದು ಮತ್ತು ಹೋರಾಟಕ್ಕೆ ಯಾವದೇ ಸ್ಪಂದನೆ ದೊರಕದಿದ್ದಲ್ಲಿ ಮತ್ತೊಮ್ಮೆ ಬೆತ್ತಲೆ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.