ಮಡಿಕೇರಿ, ಡಿ. 22: ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ವಿಧಿಸಿರುವ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಯನ್ನು ವಿರೋಧಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧರಣಿ ನಡೆಸಲಾಯಿತು. ಈ ಸಂದರ್ಭ ಪ್ರತಿಭಟನಾಕಾರರು ಸೆಕ್ಷನ್ ತೆರವಿಗೆ ಆಗ್ರಹಿಸಿದರು.ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ 577 ಆದಿವಾಸಿ ಕುಟುಂಬಗಳು ನಿರ್ಮಿಸಿದ್ದ ಗುಡಿಸಲುಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದ ಬಳಿಕ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಆದಿವಾಸಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಕೆಲವು ಹಿತಾಸಕ್ತರು ಹಾಗೂ ನಕ್ಸಲ್ ಮೂಲ ಕೆಲವು ಪ್ರಮುಖರ ಚಲನ-ವಲನಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಚೆನ್ನಂಗಿ ಮತ್ತು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿದರು. ಈ ನಿಷೇಧಾಜ್ಞೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಹೋರಾಟ ಹತ್ತಿಕ್ಕಲು
ಸೆಕ್ಷನ್ ಜಾರಿ : ಎಕೆಎಸ್
ದಿಡ್ಡಳ್ಳಿ ನಿರಾಶ್ರಿತರ ಪರವಾದ ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದಿಂದ ಜಿಲ್ಲಾಡಳಿತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆದಿವಾಸಿಗಳ ಬದುಕನ್ನು ಸುಧಾರಿಸುವ ಸಲುವಾಗಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಹೋರಾಟದಲ್ಲಿ ರಾಜ್ಯದ ಪ್ರಗತಿಪರರು ಭಾಗವಹಿಸಿದ್ದಾರೆ. ಆದರೆ ಇದನ್ನೇ ನೆಪ ವಾಗಿಟ್ಟುಕೊಂಡು
(ಮೊದಲ ಪುಟದಿಂದ) ನಿಷೇಧಾಜ್ಞೆ ಹೇರಿರುವದು ಖಂಡನೀಯ. ಪ್ರತಿಭಟನೆಯಲ್ಲಿ ಯಾವದೇ ಸಂಘಟನೆಯವರು ಭಾಗವಹಿಸಬಾರದೆನ್ನುವ ಅಧಿಕಾರ ಯಾರಿಗೂ ಇಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದವರ ಮಾತನ್ನು ಕೇಳಿ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ಸರ್ಕಾರದ ಗಮನಕ್ಕೂ ನಿಷೇಧಾಜ್ಞೆಯ ಬಗ್ಗೆ ಮಾಹಿತಿ ಇಲ್ಲ ಎಂದ ಎ.ಕೆ. ಸುಬ್ಬಯ್ಯ ನಕ್ಸಲರು ಕೆಟ್ಟವರಲ್ಲ. ಪರಿಸ್ಥಿತಿಯಿಂದಾಗಿ ಶೋಷಿತರ ಪರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಬಂದೂಕು ಹಿಡಿಯುವ ಬಗ್ಗೆ ತನ್ನ ವಿರೋಧವಿದೆ ಎಂದು ಹೇಳಿದರು. ದಲಿತರನ್ನು ದೇವಸ್ಥಾನಗಳಿಗೆ ಪ್ರವೇಶ ನಿರಾಕರಿಸಿದ ಮೇಲೆ ಚರ್ಚ್ ಅಥವಾ ಮಸೀದಿಗಳಿಗೆ ಹೋದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು ಸಂಸದರು ಹಾಗೂ ಶಾಸಕರ ಸಂಚು ನಿರ್ಬಂಧದ ಹಿಂದಿದೆ ಎಂದು ಹೇಳಿದರು. ಕಾನೂನು ತೊಡಕು ನಿವಾರಿಸಿ ನಿರಾಶ್ರಿತರಿಗೆ ದಿಡ್ಡಳ್ಳಿಯಲ್ಲಿಯೇ ವಸತಿ ಕಲ್ಪಿಸಬೇಕು, ಸಾಧ್ಯವಾಗದಿದ್ದಲ್ಲಿ ಬೇರೆಡೆ ಒದಗಿಸುವಂತೆ ಆಗ್ರಹಿಸಿದರು.
ನಟ ಚೇತನ್ ಮಾತನಾಡಿ, ದಿಡ್ಡಳ್ಳಿ ಹಾಡಿಯ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಆದಿವಾಸಿಗಳಿಗೆ ಅನ್ಯಾಯ ಮಾಡಲಾಗಿದೆ. ಮಾನವೀಯತೆ ಇರುವವರು ಮಾಡುವ ಕೆಲಸವಲ್ಲ. ದಿಡ್ಡಳ್ಳಿಯಲ್ಲಿ ಸೆಕ್ಷನ್ ಜಾರಿ ಮಾಡಿದ್ದಾರೆ. ದೇಶದ ಕಾನೂನು, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಗೌರವಿಸಿ ನಿಷೇಧಾಜ್ಞೆ ಉಲ್ಲಂಘಿಸಿ, ದಿಡ್ಡಳ್ಳಿ ಪ್ರವೇಶಿಸುವದಿಲ್ಲ. ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಹೋರಾಟ ಮಾಡಲಾಗುವದು. ಇದನ್ನು ಜಿಲ್ಲಾಡಳಿತ ಅರ್ಥ ಮಾಡಿಕೊಂಡು ನಿಷೇಧಾಜ್ಞೆಯನ್ನು ತೆರವುಗೊಳಿಸಬೇಕು. ಸಮಾಜ ಕಲ್ಯಾಣ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ಇದೆ. ಜಿಲ್ಲೆಯವರೇ ಆದ ಕಾಂಗ್ರೆಸ್ನ ದಿನೇಶ್ ಗುಂಡೂರಾವ್, ಸತೀಶ್ ಜಾರಕೀಹೊಳೆಯವರಂತಹ ನಾಯಕರು ಆದಿವಾಸಿಗಳ ಪರ ಧ್ವನಿ ಎತ್ತದಿರುವದು ವಿಷಾದನೀಯ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಬೇರೆಯಾಗಿದ್ದರೂ ಅಜೆಂಡಾ ಒಂದೇ ಆಗಿದೆ ಎಂದು ಹೇಳಿದರು.
ಈ ಸಂದರ್ಭ ಆದಿವಾಸಿಗಳ ಮುಖಂಡರಾದ ಜೆ.ಕೆ. ಅಪ್ಪಾಜಿ ಸ್ವಾಮಿ, ಡಿ.ಎಸ್. ನಿರ್ವಾಣಪ್ಪ, ಎಸ್ಡಿಪಿಐನ ರಾಜ್ಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಗೂ ಇನ್ನಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಸಿರಿಮನೆ ನಾಗರಾಜು, ಜನಶಕ್ತಿ ಸಮಿತಿಯ ರಾಜ್ಯ ಮುಖಂಡರಾದ ಪ್ರೇಮಿಚಂದ್ರ, ಹೇಮಂತ್, ಮಾನವ ಹಕ್ಕು ಹೋರಾಟ ಸಮಿತಿಯ ವಸಂತ, ಕರ್ನಾಟಕ ಆದಿವಾಸಿ ಹಕ್ಕುಗಳ ಹೋರಾಟ ಸಮಿತಿಯ ಗಣೇಶ್, ಸಿಪಿಐ(ಎಂ) ಕಾರ್ಯದರ್ಶಿ ವೈ. ಗುರುಕಾಂತ್, ಡಿವೈಎಫ್ಐನ ಜಿಲ್ಲಾ ಮುಖಂಡ ಪಿ.ಆರ್. ಭರತ್, ವೀರಾಜಪೇಟೆ ತಾ.ಪಂ. ಸದಸ್ಯೆ ಹೆಚ್. ಎಂ.ಕಾವೇರಿ, ಎಸ್ಡಿಪಿಐನ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ನಗರ ಅಧ್ಯಕ್ಷ ಪೀಟರ್, ನಗರ ಸಭಾ ಸದಸ್ಯ ಮನ್ಸೂರ್ ಹಾಗೂ ಇನ್ನಿತರರು ಇದ್ದರು.