ಸೋಮವಾರಪೇಟೆ,ಜ.19: ದಿಡ್ಡಳ್ಳಿಯಲ್ಲಿ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ಕುಟುಂಬಗಳಿಗೆ ಸೋಮವಾರಪೇಟೆ ತಾಲೂಕಿನ ಎರಡು ಭಾಗದಲ್ಲಿ ನಿವೇಶನ ಕಲ್ಪಿಸಲು ಪ್ರಯತ್ನಿಸುತ್ತಿರು ವದು ಗಮನಕ್ಕೆ ಬಂದಿದ್ದು, ಇದಕ್ಕೆ ಯಾವದೇ ಕಾರಣಕ್ಕೂ ಅವಕಾಶ ನೀಡಬಾರದು. ತಾಲೂಕಿನಲ್ಲಿರುವ ಪೈಸಾರಿ ಜಾಗವನ್ನು ಇಲ್ಲಿನ ನಿವೇಶನ ರಹಿತರಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂಬ ನಿರ್ಣಯವನ್ನು ತಾ.ಪಂ. ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.ದಿಡ್ಡಳ್ಳಿಯ ಮೂಲ ನಿವಾಸಿಗಳೊಂದಿಗೆ ಬಾಂಗ್ಲಾ, ಅಸ್ಸಾಂ, ಉಡುಪಿ, ಹುಣಸೂರುಗಳಿಂದ ಬಂದು ಸೇರಿಕೊಂಡವರಿಗೆ ಸೋಮವಾರಪೇಟೆ ತಾಲೂಕಿನ ಬಸವನಳ್ಳಿ ಹಾಗೂ ಹೆಬ್ಬಾಲೆ ಸಮೀಪದ ರಾಂಪುರದಲ್ಲಿ ನಿವೇಶನ ಹಂಚಲು ಯಾವದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದೆಂದು ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್‍ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯ ದಿಡ್ಡಳ್ಳಿಯಲ್ಲಿ 36 ಕುಟುಂಬಗಳು ಮಾತ್ರ ನಿಜವಾದ ಮೂಲನಿವಾಸಿಗಳಾಗಿದ್ದು, ಹೊರ ಜಿಲ್ಲೆ, ರಾಜ್ಯ, ಬಾಂಗ್ಲಾದಿಂದ ಬಂದಿರುವ

(ಮೊದಲ ಪುಟದಿಂದ) ಮಂದಿ ಇಲ್ಲಿನ ಮೂಲ ನಿವಾಸಿಗಳ ಸೋಗಿನಲ್ಲಿ ಪ್ರತಿಭಟನೆ ಮಾಡುತ್ತಿ ದ್ದಾರೆ. ಬುದ್ದಿಜೀವಿಗಳ ಹೆಸರಿನಲ್ಲಿ ಕೆಲವರು ದಿಡ್ಡಳ್ಳಿಗೆ ಆಗಮಿಸಿ ಗಲಭೆ ಸೃಷ್ಟಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇವರುಗಳ ಪ್ರತಿಭಟನೆಗೆ ಹೆದರಿದ ಉಸ್ತುವಾರಿ ಸಚಿವರು ಮತ್ತು ಆ ಕ್ಷೇತ್ರದ ಶಾಸಕರು ಸೋಮವಾರಪೇಟೆ ತಾ.ಪಂ. ಕಾರ್ಯನಿರ್ವಹಣಾಧಿ ಕಾರಿಗಳ ಹೆಸರಿನ ಖಾತೆಯಲ್ಲಿರುವ ತಾಲೂಕಿನ ಹೆಬ್ಬಾಲೆ ಸಮೀಪದ ರಾಂಪುರ ಹಾಗೂ ಬಸವನಹಳ್ಳಿ ಯಲ್ಲಿರುವ ಜಾಗದಲ್ಲಿ ದಿಡ್ಡಳ್ಳಿಯ ನಿರಾಶ್ರಿತರೆನ್ನಲಾದ ಸುಮಾರು 200ಕ್ಕೂ ಅಧಿಕ ಮಂದಿಗೆ ನಿವೇಶನ ನೀಡಲು ತಯಾರಿ ನಡೆಸಿದ್ದಾರೆ.

ಈ ಬಗ್ಗೆ ತಾಲೂಕು ಪಂಚಾಯಿತಿಯನ್ನಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿಯವರನ್ನಾಗಲಿ, ಖಾತೆಯನ್ನು ಹೊಂದಿರುವ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಾರದೆ ಕ್ರಮ ಕೈಗೊಂಡಿರುವದು ಖಂಡನಾರ್ಹ. ನಮ್ಮ ತಾಲೂಕಿನಲ್ಲಿಯೇ ನಿವೇಶನ ಕೋರಿ ಸುಮಾರು 1800ಕ್ಕೂ ಅಧಿಕ ನಿರ್ಗತಿಕರು ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಮೊದಲು ನಿವೇಶನ ಕಲ್ಪಿಸಬೇಕಾಗಿದೆ ಎಂದರು.

ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯವರನ್ನು ಕಡೆಗಣಿಸಿರುವ ಉಸ್ತುವಾರಿ ಸಚಿವರ ಕ್ರಮಕ್ಕೆ ಸಭೆ ಆಕ್ರೋಶ ವ್ಯಕ್ತಪಡಿಸಿತಲ್ಲದೆ, ಯಾವದೇ ಕಾರಣಕ್ಕೂ ನಮ್ಮ ತಾಲೂಕಿನ ನಿರ್ಗತಿಕರಿಗೆ ನಿವೇಶನ ನೀಡಲು ಮೊದಲ ಅವಕಾಶ ನೀಡಬೇಕು ಹಾಗೂ ದಿಡ್ಡಳ್ಳಿ ನಿರಾಶ್ರಿತರಿಗೆ ತಾಲೂಕಿನಲ್ಲಿ ನಿವೇಶನ ನೀಡಬಾರದೆಂದು ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯವನ್ನು ಉಲ್ಲಂಘಿಸಿ ಮುಂದುವರೆದರೆ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭ ಚೆಟ್ಟಳ್ಳಿ ಕ್ಷೇತ್ರದ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ನಮ್ಮ ತಾಲೂಕಿನಲ್ಲಿ ಕಾವೇರಿ ನದಿ ದಡದಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರಿಗೂ ಬೇರೆಡೆಗ ಳಲ್ಲಿ ಜಾಗ ನೀಡಬೇಕು. ಕಂದಾಯ ಇಲಾಖೆ ಟಾಟಾ ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಪೈಸಾರಿ ಜಾಗವನ್ನು ಹಂಚಿದ್ದಲ್ಲಿ ಕಾವೇರಿ ನದಿ ಸ್ವಚ್ಚತೆಯೂ ಆಗುತ್ತದೆ, ಇತ್ತ ಮಳೆಗಾಲದಲ್ಲಿ ಮನೆಗಳ ಮುಳುಗಡೆ ಸಮಸ್ಯೆಯೂ ಪರಿಹಾರವಾಗಲಿದೆ ಎಂದರು. ಅದಕ್ಕೆ ಸದಸ್ಯರುಗಳು ಸಹಮತ ವ್ಯಕ್ತಪಡಿಸಿದರು.

ಅಧಿಕಾರಿ ಅಮಾನತಿಗೆ ನಿರ್ಣಯ

ತಾಲೂಕಿನ ಅಬಕಾರಿ ಇಲಾಖೆಯಲ್ಲಿ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ. ನಟರಾಜು ತಾಲೂಕಿಗೆ ಬಂದು ಹಲವಾರು ವರ್ಷಗಳೇ ಕಳೆದಿದೆ. ಒಂದು ಬಾರಿಯಾದರೂ ತಾ.ಪಂ. ಸಭೆಗೆ ಬಂದಿಲ್ಲ, ಯಾವದೇ ಅಕ್ರಮ ಮದ್ಯ ಮಾರಾಟದ ಅಡ್ಡೆಗೆ ಧಾಳಿ ಮಾಡಿಲ್ಲ. ಹೊರ ಜಿಲ್ಲೆಗೆ ಇಲಾಖೆ ವಾಹನವನ್ನು ಕೊಂಡೊಯ್ಯುವ ಮೂಲಕ ಇಲಾಖೆಯ ವಾಹನವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೂಡ ಇದ್ದು ಈ ಅಧಿಕಾರಿ ಯನ್ನು ಕೂಡಲೆ ಅಮಾನತ್ತು ಮಾಡುವಂತೆ ಸಭೆ ನಿರ್ಣಯ ಕೈಗೊಂಡಿತು.

ಇದನ್ನು ಕಾರ್ಯಗತಗೊಳಿಸಲು ಅಬಕಾರಿ ಸಚಿವರು, ಇಲಾಖೆ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿ ಗಳಿಗೆ ನಿರ್ಣಯದ ಪ್ರತಿಯೊಂದಿಗೆ ಪತ್ರವನ್ನು ಬರೆಯುವಂತೆ ತೀರ್ಮಾನಿಸ ಲಾಯಿತು.

ಟಾಸ್ಕ್ ಫೋರ್ಸ್ ಇಂಜಿನಿಯ ರಿಂಗ್ ವಿಭಾಗದಿಂದ ಕುಡಿಯುವ ನೀರಿನ ಸಮಸ್ಯೆ ಸಕಾಲದಲ್ಲಿ ಪರಿಹಾರಗೊಳ್ಳುತ್ತಿಲ್ಲ. ಸಂಬಂಧಿತ ಅಭಿಯಂತರರನ್ನು ಪ್ರಶ್ನಿಸಿದರೆ, ಇಲ್ಲಸಲ್ಲದ ಸಬೂಬು ನೀಡುತ್ತಿದ್ದಾರೆ ಎಂದು ಆರೋಪಿಸಿದ ಸಭೆ, ಮುಂದಿನ ಒಂದು ತಿಂಗಳೊಳಗೆ ತಾಲೂಕಿನ ಪ್ರಮುಖ ಸ್ಥಳಗಳಲ್ಲಿನ ಸಮಸ್ಯೆಗಳು ಇತ್ಯರ್ಥವಾಗದೇ ಹೋದಲ್ಲಿ ಜಿ.ಪಂ. ಮುಖ್ಯ ಕಾರ್ಯ ದರ್ಶಿಯವರ ಕಚೇರಿ ಎದುರು ಎಲ್ಲಾ ಸದಸ್ಯರೂ ಧರಣಿ ಕೂರುವದಾಗಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಎಚ್ಚರಿಸಿದರು.

ಹೊಸಪಟ್ಟಣದಲ್ಲಿ ಕಿರು ನೀರಾವರಿ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ ಸಹ ಅದರ ಉದ್ಘಾಟನೆಯ ನೆಪದಲ್ಲಿ ನೀರು ಸರಬರಾಜು ಮಾಡುತ್ತಿಲ್ಲ. ಕೂಡಲೇ ಅದರ ನಿರ್ವಹಣೆಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಬೇಕೆಂದು ಅಭಿಯಂತರರಿಗೆ ಸೂಚಿಸ ಲಾಯಿತು.

ಪರೀಕ್ಷಾ ಸಮೀಪಿಸುತ್ತಿದ್ದಂತೆ ಶಿಕ್ಷಕರನ್ನು ತರಬೇತಿಗಳಿಗೆ ಶಿಕ್ಷಣ ಇಲಾಖೆ ನಿಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗುತ್ತಿದೆ. ಕೂಡಲೇ ಈ ತರಬೇತಿಯಿಂದ ಶಿಕ್ಷಕರನ್ನು ಆಯಾಯ ಶಾಲೆಗೆ ನಿಯೋಜಿ¸ Àಬೇಕೆಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಶಿಕ್ಷಣಾಧಿಕಾರಿಗಳನ್ನು ಒತ್ತಾಯಿಸಿ ದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿಗಳು ಅದು ರಾಜ್ಯವ್ಯಾಪಿ ಇರುವ ಆದೇಶ. ಅದರಂತೆ ತರಬೇತಿಗೆ ನಿಯೋಜಿಸಲಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವದಾಗಿ ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ವಿದ್ಯಾರ್ಥಿ ವಸತಿ ನಿಲಯಗಳು ಸಮರ್ಪಕವಾಗಿ ಕಾರ್ಯನಿರ್ವಹಿ ಸುತ್ತಿಲ್ಲ. ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕರ ನಿಲಯದಲ್ಲಿ ಕೇವಲ 9 ಮಂದಿಯಿದ್ದು, ವರದಿಗಳಲ್ಲಿ 24 ವಿದ್ಯಾರ್ಥಿಗಳು ಎಂದು ದಾಖಲಿಸ ಲಾಗಿದೆ. ಹಾಸ್ಟೆಲ್‍ಗಳ ಅಸಮರ್ಪಕ ನಿರ್ವಹಣೆಯಿಂದಾಗಿ ವಿದ್ಯಾರ್ಥಿ ಗಳು ಹಾಸ್ಟೆಲ್ ತೊರೆಯುತ್ತಿದ್ದಾರೆ ಎಂದು ಸದಸ್ಯೆ ತಂಗಮ್ಮ ದೂರಿದರು.

ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಣಾಧಿ ಕಾರಿಯವರು ಸದಸ್ಯರಿಗೆ ಸರಿಯಾಗಿ ಸಿಗುತ್ತಿಲ್ಲ. ಕೆಲವು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಕಾರ್ಯನಿರ್ವಹಣಾಧಿಕಾರಿಗಳಿಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಡಿ. ದರ್ಜೆ ನೌಕರರು 5ಕ್ಕಿಂತ ಹೆಚ್ಚು ಇದ್ದರೂ, ಕಚೇರಿಯಲ್ಲಿ ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅಧ್ಯಕ್ಷರು ಮತ್ತು ಸದಸ್ಯರು ದೂರಿದರು.

ಸಜ್ಜಳ್ಳಿ ಪೈಸಾರಿ ಜಾಗದಲ್ಲಿ ಆಶ್ರಯ ನಿರಾಶ್ರಿತರಿಗೆ ಹಕ್ಕುಪತ್ರ ನೀಡಲು ಜನವರಿ 26ರಂದು ಸಭೆ ನಿಗದಿಗೊಳಿಸಲಾಗಿದೆ ಎಂದು ನೋಡಲ್ ಅಧಿಕಾರಿ ಪ್ರದೀಪ್ ಸಭೆಗೆ ತಿಳಿಸಿದರು. ಇದೇ ಸಂದರ್ಭ ಉಪಾಧ್ಯಕ್ಷರು ಮತ್ತು ಸದಸ್ಯರು ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಯಾರದೋ ಪಿತೂರಿಯಿಂದ ತರಾತುರಿಯಲ್ಲಿ ಹಕ್ಕುಪತ್ರ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ. ಯಾವದೇ ಕಾರಣಕ್ಕೂ ನಿಗದಿತ ದಿನದಂದು ಹಕ್ಕು ಪತ್ರ ನೀಡಬಾರದು ಎಂದು ಸದಸ್ಯರು ಹೇಳಿದರು.

ತಾಲೂಕಿನಲ್ಲಿ ಆನೆ ಧಾಳಿಯಿಂದ ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ಕಾರ ನೀಡುವ ಪರಿಹಾರದ ಹಣ ಸಾಲುತ್ತಿಲ್ಲ. ಕೂಡಲೇ ಬೆಳೆ ಹಾನಿ ಪರಿಹಾರವನ್ನು ಹೆಚ್ಚು ಮಾಡಬೇಕೆಂದು ಮಣಿ ಉತ್ತಪ್ಪ ಹೇಳಿದರು. ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಅನೇಕ ಕೆರೆಗಳು ಅರಣ್ಯ ಪ್ರದೇಶದಲ್ಲಿ ಇದ್ದು, ಅದರ ಹೂಳೆತ್ತುವ ಕೆಲಸವನ್ನು ಅರಣ್ಯ ಇಲಾಖೆ ಮಾಡಿದಲ್ಲಿ ಕಾಡಿನ ಪ್ರಾಣಿಗಳಿಗೆ ಕುಡಿಯಲು ನೀರು ಸಾಕಷ್ಟು ಸಿಗುತ್ತದೆ ಎಂದು ಅಧಿಕಾರಿಯ ಗಮನ ಸೆಳೆದರು.

ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಧರ್ಮಪ್ಪ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.