ಮಡಿಕೇರಿ, ಡಿ. 21: ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 300 ಎಕರೆಗೂ ಅಧಿಕ ಸರಕಾರಿ ಭೂಮಿ ಅತಿಕ್ರಮಿಸಲ್ಪಟ್ಟಿದ್ದು, ಇದನ್ನು ಸರಕಾರ ತನ್ನ ವಶಕ್ಕೆ ಪಡೆದು ದಿಡ್ಡಳ್ಳಿ ನಿರಾಶ್ರಿತರಿಗೆ ಹಂಚಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಮಿತಿಯ ಪ್ರಮುಖರು ದಿಡ್ಡಳ್ಳಿಯಲ್ಲಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಆದಿವಾಸಿಗಳ ಸ್ಥಿತಿ ಶೋಚನೀಯವಾಗಿದ್ದು, ದುರ್ಬಲ ವರ್ಗಕ್ಕೆ ನ್ಯಾಯ ಒದಗಿಸುವ ಕಾರ್ಯವನ್ನು ಆಡಳಿತ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ ದಿಡ್ಡಳ್ಳಿಯಲ್ಲಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದ್ದು, ಆದಿವಾಸಿಗಳು ಬೀದಿಪಾಲಾಗಿದ್ದಾರೆ. ಈ ಬೆಳವಣಿಗೆ ಅತ್ಯಂತ ಖಂಡನೀಯ ಮತ್ತು ವಿಷಾದಕರವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗಿದ ಅಪಚಾರವಾಗಿದೆ. ಆದಿವಾಸಿಗಳ ಪರ ನಡೆಯುತ್ತಿರುವ ನ್ಯಾಯಯುತ ಹೋರಾಟಕ್ಕೆ ಸಮಿತಿ ಬೆಂಬಲ ಸೂಚಿಸಲಿದೆ. ಜಿಲ್ಲೆಯ ಎಲ್ಲಾ ನಿರಾಶ್ರಿತರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಮಿತಿಯ ಅಧ್ಯಕ್ಷ ಎಂ.ಹೆಚ್. ಮೊಹಮ್ಮದ್ ಮುಸ್ತಫ ಅಪರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಕೆ.ಟಿ. ಬಷೀರ್, ಜಿಲ್ಲಾ ವಕ್ತಾರ ಕೆ.ಎಂ. ಮೊಹಮ್ಮದ್, ವಕೀಲರಾದ ಕೆ.ವಿ. ಸುನಿಲ್, ರಮೇಶ್ ಹಾಗೂ ಮತ್ತಿತರ ಪ್ರಮುಖರು ಹಾಜರಿದ್ದರು.