ಬೆಂಗಳೂರು, ಡಿ. 15: ದಿಡ್ಡಳ್ಳಿಯಲ್ಲಿ 576 ಗಿರಿಜನರ ಗುಡಿಸಲುಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಿದ ಪ್ರಕರಣ ಇದೀಗ ರಾಜ್ಯದ ಉನ್ನತ ವಲಯದ ಗಮನಕ್ಕೆ ಬಂದಿದ್ದು, ಹೊಸ ತಿರುವು ಪಡೆದಿದೆ.ರಾಜ್ಯದ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿ ಮಾಡಿ ಲಿಖಿತವಾಗಿ ಗಿರಿಜನರ ಪರವಾಗಿ ವಿವರ ಮನವಿಯೊಂದನ್ನು ಸಲ್ಲಿಸಿದರು. ಅಲ್ಲದೇ ಈ ಅಮಾಯಕ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದರು.
ಪ್ರಕರಣದ ಬಗ್ಗೆ ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು ಪ್ರಸ್ತಾಪಿಸಿದ್ದು, ಈ ಕುರಿತು ಸಚಿವ ಕಾಗೋಡು ತಿಮ್ಮಪ್ಪ ಅವರು ಪುನರ್ ವಸತಿ ಕಲ್ಪಿಸುವ ಭರವಸೆ ನೀಡಿದ್ದನ್ನು ಈ ಸಂದರ್ಭ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಯಿತು.
ಸಚಿವ ಕಾಗೋಡು ತಿಮ್ಮಪ್ಪ ಅವರು ಶುಕ್ರವಾರ ಮಡಿಕೇರಿಗೆ ಆಗಮಿಸಲಿದ್ದು, ಈ ಸಂದರ್ಭ ಅವರನ್ನು ಭೇಟಿ ಮಾಡಿ ಚರ್ಚಿಸುವಂತೆ ಸೂಚಿಸಿದ ಮುಖ್ಯಮಂತ್ರಿಯವರು ತಾನು ಈ ಕುರಿತು ಗಮನ ಹರಿಸುವದಾಗಿ ಆಶ್ವಾಸನೆಯಿತ್ತರು. ಡಿಸಿಸಿ ಉಪಾಧ್ಯಕ್ಷ ಪಿ.ಕೆ. ಪೊನ್ನಪ್ಪ ಇದ್ದರು.