ಸಿದ್ದಾಪುರ, ಜು. 23: ಆಟೋ ಚಾಲಕರು ತಮ್ಮ ವಾಹನದ ದಾಖಲೆಗಳನ್ನು ಇಟ್ಟುಕೊಂಡು, ಸಂಚಾರದ ವೇಳೆ ಕಾನೂನು ಪಾಲಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ-ಕಾರ್ಯದರ್ಶಿ ಹಾಗೂ ನ್ಯಾಯಮೂರ್ತಿ ಮೋಹನ್ ಪ್ರಭು ಕರೆ ನೀಡಿದರು.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ನಡೆದ ಆಟೋ ಚಾಲಕರ ಹಾಗೂ ಮಾಲೀಕರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪೊಲೀಸ್ ಠಾಣೆಯ ಆವರಣದಲ್ಲಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಆಟೋ ಚಾಲಕರು ತಮ್ಮ ವಾಹನದ ಎಲ್ಲಾ ದಾಖಲಾತಿ ಹಾಗೂ ವಿಮಾ ದಾಖಲೆಗಳನ್ನು ಸಮರ್ಪಕವಾಗಿಟ್ಟು ಕೊಳ್ಳಬೇಕು. ಕುಡಿದು ವಾಹನ ಚಲಾಯಿಸಿ ಅನಾಹುತ ಸಂಭವಿಸಿ ದ್ದಲ್ಲಿ ಅದು ಕೊಲೆಗೆ ಸಮನಾಗಿರುತ್ತದೆ. ಹೀಗಾಗಿ ತಮ್ಮ ಇತಿ-ಮಿತಿಗಳನ್ನರಿತು ಚಾಲನೆ ಮಾಡಬೇಕೆಂದರು. ಆಟೋ ಚಾಲಕರು ಕಾನೂನನ್ನು ಅರಿತು, ಕಾನೂನಿಗೆ ಗೌರವ ನೀಡಬೇಕು. ಒಬ್ಬ ಆಟೋ ಚಾಲಕ ಅಂಬಿಗನಂತೆ. ಹೀಗಾಗಿ ತಮ್ಮನ್ನು ನಂಬಿ ಬರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲಪಿಸುವದು ಚಾಲಕರ ಆದ್ಯ ಕರ್ತವ್ಯವಾಗಿದೆ ಎಂದರು. ಇತ್ತೀಚೆಗೆ ಪರಿಸರ ನಾಶ ವಿಪರೀತವಾಗಿದ್ದು, ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕೆಂದು ಇದೇ ಸಂದರ್ಭ ಕರೆ ನೀಡಿದರು.

ವಕೀಲ ಎಂ.ಎಸ್. ವೆಂಕಟೇಶ್, ಠಾಣಾಧಿಕಾರಿ ಬಿ.ಜಿ. ಕುಮಾರ್, ಸಹಾಯಕ ಠಾಣಾಧಿಕಾರಿ ಕುಶಾಲಪ್ಪ, ಸೀತಾರಾಮ್, ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿಯ ಆಟೋ ಚಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.