ಮಡಿಕೇರಿ, ಸೆ. 27: ಐತಿಹಾಸಿಕ ನಾಡಹಬ್ಬ ದಸರಾ ಉತ್ಸವಕ್ಕೆ ಸರಕಾರ ರೂ. 1 ಕೋಟಿ ಅನುದಾನ ಮಂಜೂರು ಮಾಡಿದೆ. ಮಡಿಕೇರಿ ದಸರಾಗೆ ರೂ. 75ಲಕ್ಷ ಹಾಗೂ ಗೋಣಿಕೊಪ್ಪಲು ದಸರಾಗೆ ರೂ. 25 ಲಕ್ಷ ಅನುದಾನ ಹಂಚಿಕೆ ಮಾಡಲಾಗಿದೆ.

ದಸರಾ ಉತ್ಸವಕ್ಕೆ ಅನುದಾನ ಒದಗಿಸುವಂತೆ ಜಿಲ್ಲೆಯಿಂದ ನಿಯೋಗ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಮಡಿಕೇರಿ ದಸರಾಗೆ ರೂ. 1 ಕೋಟಿ ಮೊತ್ತದ ಬೇಡಿಕೆ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ಸಿದ್ದರಾಮಯ್ಯ ಅವರು ಮಡಿಕೇರಿ ದಸರಾಗೆ ರೂ. 75ಲಕ್ಷ ಹಾಗೂ ಗೋಣಿಕೊಪ್ಪಲು ದಸರಾಗೆ ರೂ. 25ಲಕ್ಷ ಅನುದಾನಕ್ಕೆ ಮಂಜೂರಾತಿ ನೀಡಿದ್ದಾರೆ ಎಂದು ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ತಿಳಿಸಿದ್ದಾರೆ. ಕಳೆದ ವರ್ಷ ಬರ ಪರಿಸ್ಥಿತಿ ಹಿನ್ನೆಲೆ ರೂ. 50ಲಕ್ಷ ಬಿಡುಗಡೆಯಾಗಿತ್ತು. ಅದರ ಹಿಂದಿನ ವರ್ಷ ರೂ. 1 ಕೋಟಿ ಅನುದಾನ ಲಭಿಸಿತ್ತು.

ಮುಖ್ಯಮಂತ್ರಿ ಬಳಿ ತೆರಳಿದ್ದ ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಸಚಿವೆ ಸುಮಾವಸಂತ್, ದಸರಾ ಸಮಿತಿ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಚುಮ್ಮಿದೇವಯ್ಯ, ಖಜಾಂಚಿ ಅನಿತಾ ಪೂವಯ್ಯ, ನಗರಸಭಾ ಸದಸ್ಯರುಗಳಾದ ನಂದಕುಮಾರ್, ಪ್ರಕಾಶ್ ಆಚಾರ್ಯ, ಮನ್ಸೂರ್ ಅಹ್ಮದ್, ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ಕಾರ್ಯದರ್ಶಿ ಜಪ್ಪು ಸುಬ್ಬಯ್ಯ, ಖಜಾಂಚಿ ರಾಮಕೃಷ್ಣ ಇದ್ದರು.

*ಗೋಣಿಕೊಪ್ಪಲು: ಶ್ರೀ ಕಾವೇರಿ ದಸರಾ ಸಮಿತಿಯ 37ನೇ ವರ್ಷದ ಜನೋತ್ಸವ ಆಚರಣೆಗೆ ಸರಕಾರದಿಂದ 25 ಲಕ್ಷ ರೂ. ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ದಸರಾ ಆಚರಣೆಗೆ ಬಿಡುಗಡೆ ಮಾಡಿರುವದು ಸಂತಸ ತಂದಿದೆ ಎಂದು ಕಾವೇರಿ ದಸರಾ ಸಮಿತಿಯ ಕಾರ್ಯಧ್ಯಕ್ಷ ಕೆ.ಪಿ. ಬೋಪಣ್ಣ ತಿಳಿಸಿದ್ದಾರೆ.

ಈ ಬಾರಿಯ ದಸರಾ ಆಚರಣೆಗೆ ಸರಕಾರ ಹಣ ನೀಡುವದಿಲ್ಲ ಎಂಬ ಗೊಂದಲ ಇತ್ತು. ದಸರಾ ಆಚರಣೆ ಹೇಗೆ ನಡೆಸಬೇಕೆಂಬ ಚಿಂತೆ ಎದುರಾಗಿತ್ತು. ಇದೀಗ ಸರಕಾರ ಹಣ ಬಿಡುಗಡೆ ಮಾಡಿ ದಸರಾ ಆಚರಣೆಗೆ ಅನುವು ಮಾಡಿಕೊಟ್ಟಿರುವದು ಸಂತೋಷ ತಂದಿದೆ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷೆ ಸೆಲ್ವಿ ಹೇಳಿದರು.