ಕುಶಾಲನಗರ, ಆ. 20: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಪ್ರಥಮ ತಂಡದ 2 ಸಾಕಾನೆಗಳನ್ನು ಕಾವೇರಿ ನಿಸರ್ಗಧಾಮದಿಂದ ಬೀಳ್ಕೊಡಲಾಯಿತು. ನಿಸರ್ಗಧಾಮದ ಆವರಣದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವದರೊಂದಿಗೆ ದುಬಾರೆಯ ಆನೆಗಳಾದ ವಿಜಯ ಹಾಗೂ ಕಾವೇರಿ ಆನೆಗಳಿಗೆ ಕಬ್ಬು ತಿನಿಸುವ ಮೂಲಕÀ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಶುಭಹಾರೈಸಿ ಕಳುಹಿಸಿಕೊಡಲಾಯಿತು. ಆನೆಗಳನ್ನು ಲಾರಿ ಮೂಲಕ ಮೈಸೂರು ಜಿಲ್ಲೆಯ ನಾಗಪುರಕ್ಕೆ ಕಳುಹಿಸಿಕೊಡಲಾಗಿದ್ದು ತಾ. 21 ರಂದು (ಇಂದು) ಅಲ್ಲಿಂದ ಗಜಪಯಣ ಮೈಸೂರಿನತ್ತ ಸಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 5 ಆನೆಗಳಲ್ಲಿ ಉಳಿದ ಮೂರು ಆನೆಗಳಾದ ಹರ್ಷ, ವಿಕ್ರಂ, ಪ್ರಶಾಂತ್ ಆನೆಗಳನ್ನು ಮುಂದಿನ ಆದೇಶ ಬಂದ ನಂತರ ಮೈಸೂರಿಗೆ ಕಳುಹಿಸಿಕೊಡಲಾಗುವದು ಎಂದು ಕುಶಾಲನಗರ ಪ್ರಬಾರ ಅರಣ್ಯ ವಲಯಾಧಿಕಾರಿ ದಯಾನಂದ್ ತಿಳಿಸಿದ್ದಾರೆ.
ಕಾವೇರಿ ಆನೆ ಕಳೆದ 5 ವರ್ಷಗಳಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದು, ವಿಜಯ ಕಳೆದ 2 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಂಡಿಲ್ಲ. ಈ ಬಾರಿ ಮತ್ತೆ ತೆರಳುತ್ತಿದೆ ಎಂದು ಮಾಹಿತಿ ಒದಗಿಸಿದ್ದಾರೆ. ವಿಕ್ರಂ ಮತ್ತು ಪ್ರಶಾಂತ್ ಆನೆಗಳು ಎರಡು ಆನೆಗಳನ್ನು ಲಾರಿಗೆ ಹತ್ತಿಸುವಲ್ಲಿ ಸಹಕರಿಸಿದವು.
ಮಾವುತರಾದ ಡೋಬಿ, ದೊರೆ ಕಾವಾಡಿಗರು ಸೇರಿದಂತೆ ಕುಟುಂಬ ಸದಸ್ಯರು ಆನೆಗಳೊಂದಿಗೆ ಲಾರಿಗಳಲ್ಲಿ ನಾಗಪುರದತ್ತ ಪ್ರಯಾಣಿಸಿದರು. ಮೈಸೂರು ವಿಭಾಗದ ಉಪವಲಯ ಅರಣ್ಯಾಧಿಕಾರಿ ಬಿ.ಎ.ಮಹೇಶ್, ಅಂಥೋಣಿಸ್ವಾಮಿ, ಲೋಕೇಶ್, ಸುಂದರ್ ನೇತೃತ್ವದ ತಂಡ ಮೈಸೂರಿನಲ್ಲಿ ಆನೆಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದು, ಕುಶಾಲನಗರದ ನಿಸರ್ಗಧಾಮದ ಬಳಿಯಿಂದ ಆನೆಗಳನ್ನು ಎರಡು ಲಾರಿಗಳ ಮೂಲಕ ಕೊಂಡೊಯ್ಯಲಾಯಿತು.
ಕುಶಾಲನಗರ ಉಪ ಅರಣ್ಯ ವಲಯಾಧಿಕಾರಿಗಳಾದ ರಂಜನ್, ಶಿವರಾಂ, ದೇವಯ್ಯ, ರಾಜಪ್ಪ ಮತ್ತು ಸಿಬ್ಬಂದಿಗಳು ಇದ್ದರು.