ಮಡಿಕೇರಿ, ಅ. 20: ದಸರಾ ಜನೋತ್ಸವ ಎನ್ನುವದು ದೇವರ ಕಾರ್ಯವಾಗಿದ್ದು, ದೈವಿಕ ಶಕ್ತಿಗಳ ಮೂಲಕ ನಾಡು ಸುಭಿಕ್ಷವಾಗುವಂತೆ ಪ್ರಾರ್ಥಿಸಲಾಗುತ್ತದೆ. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ವ್ಯಾಪಿಸಿರುವಂತೆ ಮಡಿಕೇರಿ ದಸರಾದಲ್ಲೂ ರಾಜಕೀಯ, ಗುಂಪುಗಾರಿಕೆ, ದಬ್ಬಾಳಿಕೆ, ಒತ್ತಡ, ಸ್ವಜನ ಪಕ್ಷಪಾತ ಮನೆ ಮಾಡಿದ್ದು, ಇದಕ್ಕೆ ದಶಮಂಟಪಗಳಿಗೆ ಬಹುಮಾನ ನೀಡುವ ಸಂದರ್ಭ ತೋರಿದ ತಾರತಮ್ಯ ಸಾಕ್ಷಿಯಾಗಿದೆ ಎಂದು ಜಾತ್ಯತೀತ ಜನತಾ ದಳದ ವಕ್ತಾರ ಬಿ.ಎಸ್. ಭರತ್‍ಕುಮಾರ್ ಆಪಾದಿಸಿದ್ದಾರೆ.

ಈ ಬಾರಿಯ ದಸರಾದಲ್ಲಿ ದಶಮಂಟಪಗಳ ವೈಭವವನ್ನು ವೀಕ್ಷಿಸಿ ಅಂಕಗಳನ್ನು ನೀಡಲು ನೇಮಕ ಮಾಡಿದ ತೀರ್ಪುಗಾರರ ತಂಡಕ್ಕೆ ತೀರ್ಪುಗಾರಿಕೆ ಮಾಡುವ ಅರ್ಹತೆ ಇರಲಿಲ್ಲ ಎನ್ನುವದು ತೀರ್ಪು ಪ್ರಕಟವಾದ ನಂತರ ತಿಳಿದು ಬಂದಿದೆ ಎಂದರು.

ತೀರ್ಪುಗಾರÀರಾಗಿ ಮಡಿಕೇರಿ ದಸರಾದಲ್ಲಿ ಭಾಗವಹಿಸಲು ಅರ್ಹತೆ ಇರುವ ರಾಜ್ಯ ಮಟ್ಟದ ಕಲಾವಿದರು ತಯಾರಿದ್ದರೂ ದಸರಾ ಸಮಿತಿ ಅಥವಾ ದಶಮಂಟಪ ಸಮಿತಿ ಇವರುಗಳನ್ನು ಪರಿಗಣಿಸದೆ ಅರ್ಹತೆ ಇಲ್ಲದವರನ್ನು ನೇಮಕ ಮಾಡುವ ಮೂಲಕ ಪ್ರತಿವರ್ಷ ಗೊಂದಲವನ್ನು ಸೃಷ್ಟಿಸುತ್ತಿದೆ. ದಶಮಂಟಪ ಸಮಿತಿಗಳ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತಿದೆ. ಮುಂದಿನ ವರ್ಷದಿಂದಲಾದರೂ ಈ ಎಲ್ಲಾ ಅವ್ಯವಸ್ಥೆಗಳನ್ನು ದೂರ ಮಾಡಲು ನಗರದಲ್ಲಿರುವ ಹಿರಿಯರ ಮತ್ತು ಪ್ರಜ್ಞಾವಂತರ ಸಲಹೆ ಸೂಚನೆಗಳನ್ನು ಪಾಲಿಸುವದು ಸೂಕ್ತ ಎಂದಿದ್ದಾರೆ.

ಮಡಿಕೇರಿ ದಸರಾ ಜನೋತ್ಸವದ ಪರಿಕಲ್ಪನೆ ಬದಲಾಗಬೇಕಾಗಿದೆ. ಈ ದಸರಾ ಪ್ರವಾಸೋದ್ಯಮಕ್ಕೆ ಪೂರಕವಾಗಿ ನಡೆಯಬೇಕಾಗಿದೆ. ಮಡಿಕೇರಿ ದಸರಾಕ್ಕೆ ಕರಗೋತ್ಸವವೇ ಮೂಲ ಆಧಾರ ಹಾಗೂ ಧಾರ್ಮಿಕ ಸ್ಪರ್ಷವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕರಗ ಹೊರುವ ವ್ರತಾಧಾರಿಗಳನ್ನು ಕೆಲವು ಪ್ರಭಾವಿಗಳು ಸೂಕ್ತ ಗೌರವವನ್ನು ನೀಡದೆ ನಿರ್ಲಕ್ಷಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುವದಲ್ಲದೆ ಸಂಕಷ್ಟದಲ್ಲಿರುವ ಕರಗ ವ್ರತಾಧಾರಿಗಳಿಗೆ ಅಗತ್ಯ ನೆರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.