ಮಡಿಕೇರಿ, ಡಿ. 3: ರಾಜರ ಕಾಲದಲ್ಲಿ ಸೇವೆಯಲ್ಲಿ ದಳವಾಯಿ ಹುದ್ದೆ ಅಲಂಕರಿಸಿದ್ದ ಕನ್ನಂಡ ಪಡೆಬೀರ ದೊಡ್ಡಯ್ಯ ಅವರ 250ನೇ ಪುಣ್ಯದಿನವನ್ನು ಇಂದು ಆಚರಿಸಲಾಯಿತು.ಕನ್ನಂಡಬಾಣೆಯಲ್ಲಿರುವ ಪಡೆಬೀರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಳವಾಯಿ ಕನ್ನಂಡ ಪಡೆಬೀರ ದೊಡ್ಡಯ್ಯ ಟ್ರಸ್ಟ್ನ ಅಧ್ಯಕ್ಷ ಕ. ಕನ್ನಂಡ ಅಚ್ಚಪ್ಪ ಅವರು ದೊಡ್ಡಯ್ಯ ಅವರ ಕುರಿತು ಮಾತನಾಡಿದರು. 1732 ರಿಂದ 1767ರ ವರೆಗೆ ಜೀವಿಸಿದ್ದ ದೊಡ್ಡಯ್ಯ ಅವರು ಕೊಡಗಿನ ರಾಜ ಮುದ್ದುರಾಜರ ಅವಧಿಯಲ್ಲಿ ರಾಜರ ಸೇನೆಯ ದಳವಾಯಿ ಆಗಿ ಮಹಮ್ಮದಿಯರ ಸೇನೆಯನ್ನು ಸೋಲಿಸಿದ ಕೀರ್ತಿಗೆ ಪಾತ್ರರಾಗಿದ್ದರಲ್ಲದೆ, ಎರಡು ಬಾರಿ ಸೋಲಿಸಿ ಮೂರನೇ ಬಾರಿಗೆ ಯುದ್ಧದಲ್ಲಿ ವೀರಮರಣವನ್ನಪ್ಪಿದರು. ಆಗಿನ ದಳವಾಯಿ ಹುದ್ದೆ ಈಗಿನ ಸೇನೆಯ ಮೇಜರ್ ಹುದ್ದೆಗೆ ಸಮನಾದುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟ್ಟಸ್ಟ್ ಉಪಾಧ್ಯಕ್ಷೆ ಕನ್ನಂಡ ನಿರ್ಮಲ ಸೋಮಯ್ಯ, ಕಾರ್ಯದರ್ಶಿ ರಾಯ್ಪೊನ್ನಪ್ಪ, ವಾಸು, ಭೀಮಯ್ಯ, ನಿವೃತ್ತ ನ್ಯಾಯಾಧೀಶ ತಮ್ಮಯ್ಯ ಇನ್ನಿತರರು ಪಾಲ್ಗೊಂಡಿದ್ದರು. ಇದೇ ಸಂದರ್ಭ ಕುಟುಂಬದ ಸಾಧಕರುಗಳನ್ನು ಸನ್ಮಾನಿಸಲಾಯಿತು.