ಮಡಿಕೇರಿ, ಜೂ. 11: 10ನೇ ತರಗತಿ ಪರೀಕ್ಷೆಯಲ್ಲಿ ಶೇ.97 ರಷ್ಟು ಫಲಿತಾಂಶ ಗಳಿಸಲು ಶ್ರಮಿಸಿದ ಹಾಕತ್ತೂರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಹೆಚ್.ಪಿ. ದೇವದಾಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲೆ ವಿದ್ಯಾಭ್ಯಾಸ ಮಾಡಿದ ತಾವು ಈಗ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಯ ಶಿಕ್ಷಕರುಗಳು ಬಡ ವಿದ್ಯಾರ್ಥಿಗÀಳ ಜ್ಞಾನಾರ್ಜನೆಗಾಗಿ ಶ್ರಮಿಸುತ್ತಿದ್ದು, ಇವರ ಕಾರ್ಯ ಕ್ಷಮತೆಯನ್ನು ಗುರುತಿ ಸುತ್ತಿರುವದು ಶ್ಲಾಘನೀಯವೆಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸೇವೆ ಅವಿಸ್ಮರಣೀಯವಾಗಿದ್ದು, ಕೆಲವು ಕೊರತೆಗಳ ನಡುವೆಯೂ ಶೇ.90 ಕ್ಕಿಂತ ಹೆಚ್ಚಿನ ಸಾಧನೆ ಮಾಡುತ್ತಿ ರುವದು ಹೆಮ್ಮೆಯ ವಿಚಾರವೆಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ, ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಕಳೆದ ಆರು ವರ್ಷಗಳಿಂದ ಸರ್ಕಾರಿ ಶಾಲೆಗಳ ಶಿಕ್ಷಕರುಗಳನ್ನು ಸಮಿತಿ ಗೌರವಿಸುತ್ತಾ ಬಂದಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮವನ್ನು ಇನ್ನು ಮುಂದೆಯೂ ಸಮಿತಿ ವತಿಯಿಂದ ನಡೆಸಲಾಗುವದೆಂದು ತಿಳಿಸಿದರು.

ಸನ್ಮಾನಿತ ಶಿಕ್ಷಕರು: ಕಾರ್ಯಕ್ರಮ ದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎ. ರಾಮಚಂದ್ರ, ಶಿಕ್ಷಕರುಗಳಾದ ಮೀನ ಎಂ.ಎಂ., ವನಜ, ಬಿ.ಎಂ. ಜಯಂತಿ, ಕೆ.ಜಿ. ಭವಾನಿ ಶಂಕರ್, ಗಾಯತ್ರಿ ದೇವಿ, ಸಿ.ಎಂ. ಮುನೀರ್ ಹಾಗೂ ಕುಸುಮ ಅವರುಗಳನ್ನು ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಬಿ.ಎಸ್. ಸುಮ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎ. ರವಿ, ಪ್ರಮುಖರಾದ ಹೆಚ್.ಡಿ. ಗೋಪಾಲ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.