ಸೋಮವಾರಪೇಟೆ, ಡಿ. 2: ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಈಚಲಪುರ ಗ್ರಾಮದಲ್ಲಿ ನೆಲೆ ನಿಂತಿರುವ ದಲಿತ ಕುಟುಂಬಗಳ ಸೌಕರ್ಯಗಳಿಗೆ ಅಡ್ಡಿಪಡಿಸುವ ಮೂಲಕ ವ್ಯಕ್ತಿಯೋರ್ವರು ದೌರ್ಜನ್ಯ ಎಸಗುತ್ತಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಹೋರಾಟ ಸಂಘಟಿಸಲಾಗುವದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ಎಚ್ಚರಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿರುವ ದಲಿತ ಕಾಲೋನಿಯ ಮನೆಗಳ ಮುಂಭಾಗವಿದ್ದ ಸಾರ್ವಜನಿಕ ಚರಂಡಿಗೆ ವ್ಯಕ್ತಿಯೋರ್ವರು ಜೆಸಿಬಿ ಯಂತ್ರದಿಂದ ಬಂಡೆಕಲ್ಲುಗಳು ತುಂಬಿಸಿ ನೀರಿನ ಹರಿವಿಗೆ ತಡೆಯೊಡ್ಡಿದ್ದಾರೆ. ಇದರಿಂದಾಗಿ ಗೃಹ ಉಪಯೋಗದ ನೀರು ಶೇಖರಣೆಗೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ ಎಂದು ದೂರಿದರು.

ದಲಿತ ವರ್ಗದವರಿಗೆ ಕಿರುಕುಳ ನೀಡುವ ಉದ್ದೇಶದಿಂದಲೇ ಚರಂಡಿಗೆ ಕಲ್ಲುಗಳನ್ನು ಹಾಕಲಾಗಿದೆ. ಈ ಬಗ್ಗೆ ಬ್ಯಾಡಗೊಟ್ಟ ಗ್ರಾ.ಪಂ.ಗೆ ದೂರು ನೀಡಿದರೆ ಆಡಳಿತ ಮಂಡಳಿಯವರು ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮತ್ತು ತಹಶೀಲ್ದಾರ್‍ಗೆ ದೂರು ನೀಡಲಾಗಿದೆ. ತಕ್ಷಣ ಸ್ಥಳಪರಿಶೀಲನೆ ನಡೆಸಿ ಸದರಿ ವ್ಯಕ್ತಿಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿದ್ದ ದಸಂಸ ತಾಲೂಕು ಸಂಯೋಜಕ ಎನ್.ಆರ್. ದೇವರಾಜ್ ಮಾತನಾಡಿ, ಇದರೊಂದಿಗೆ ಈಚಲಪುರ ಗ್ರಾಮದ ಸರ್ವೆ ನಂ. 61/1 ರಲ್ಲಿ 33.27 ಎಕರೆ ಪೈಸಾರಿ ಜಾಗವಿದ್ದು, ಇದರಲ್ಲಿ 5 ಎಕರೆಯನ್ನು ಮೊರಾರ್ಜಿ ಶಾಲೆ ನಿರ್ಮಾಣಕ್ಕೆ ಮೀಸಲಿರಿಸಲಾಗಿದೆ. ಉಳಿದ ಜಾಗದಲ್ಲಿ ದಲಿತರು ಮನೆ ನಿರ್ಮಿಸಿಕೊಂಡಿದ್ದಾರೆ.

ಈ ಮಧ್ಯೆಯೂ ಗ್ರಾಮದಲ್ಲಿ 4 ಎಕರೆ ಜಾಗ ಪೈಸಾರಿಯಿದ್ದು, ಇದನ್ನು ಗ್ರಾಮಸ್ಥರಿಗೆ ನೀಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಕೊಡ್ಲಿಪೇಟೆ ವಿಭಾಗದ ಕಂದಾಯ ನಿರೀಕ್ಷಕರು ಹುನ್ನಾರ ನಡೆಸಿ ಬೇರೊಂದು ಯೋಜನೆಗೆ ಜಾಗವನ್ನು ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇದೇ ಹೋಬಳಿಯಲ್ಲಿ ಸಾವಿರಾರು ಎಕರೆ ಪೈಸಾರಿ ಜಾಗವಿದ್ದು, ಸರ್ಕಾರದ ಯೋಜನೆಗಳಿಗೆ ಬಳಸಿಕೊಳ್ಳಲು ಯಾವದೇ ಅಭ್ಯಂತರವಿಲ್ಲ. ಆದರೆ ಈಚಲಪುರ ಗ್ರಾಮದಲ್ಲಿರುವ 4 ಎಕರೆ ಜಾಗವನ್ನು ಯಾವದೇ ಕಾರಣಕ್ಕೂ ಬಿಟ್ಟುಕೊಡುವದಿಲ್ಲ. ಇದನ್ನು ದಲಿತರಿಗೆ ನೀಡಬೇಕು. ಕಂದಾಯ ನಿರೀಕ್ಷಕರನ್ನು ತಕ್ಷಣ ಅಮಾನತು ಮಾಡಬೇಕು.

ಈ ಬಗ್ಗೆ ಮುಂದಿನ 8 ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಪಿ. ಹೊನ್ನಪ್ಪ, ಈಚಲಪುರ ಗ್ರಾಮಾಧ್ಯಕ್ಷ ರಾಮಚಂದ್ರ, ಗ್ರಾಮಸ್ಥರಾದ ನಿಂಗರಾಜು, ಪುಟ್ಟಸ್ವಾಮಿ ಅವರುಗಳು ಉಪಸ್ಥಿತರಿದ್ದರು.