ಸೋಮವಾರಪೇಟೆ, ಆ. 9: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಯಾದವ್ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟ ಆರೋಪಿಸಿದೆ.

ಪಂಚಾಯಿತಿ ಅಧ್ಯಕ್ಷೆ ಕೂಡ ಹಿಂದುಳಿದ ಜಾತಿ ವಿಶ್ವಕರ್ಮಕ್ಕೆ ಸೇರಿರುವದರಿಂದ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಪಂಚಾಯಿತಿ 6 ಮಂದಿ ಸದಸ್ಯರುಗಳು ಸೇರಿ ಮಾನಸಿಕ ಕಿರುಕುಳ ನೀಡುತ್ತಿರುವದನ್ನು ಒಕ್ಕೂಟ ಖಂಡಿಸುತ್ತದೆ ಎಂದು ಒಕ್ಕೂಟ ಪ್ರಧಾನ ಕಾರ್ಯದರ್ಶಿ ಬಿ.ಇ. ಜಯೇಂದ್ರ ಹಾಗೂ ಖಜಾಂಚಿ ಎಚ್.ಎ. ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿಡಿಓ ಯಾದವ್ ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದು, ಇಂತಹ ಅಧಿಕಾರಿಯ ವರ್ಗಾವಣೆಗೆ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಪಂಚಾಯಿತಿಯ ಸದಸ್ಯರು ಪಟ್ಟುಹಿಡಿದಿರುವದು ಹಾಸ್ಯಾಸ್ಪದ. ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡುವದು ಇವರ ಒಂದಂಶದ ಕಾರ್ಯಕ್ರಮ ಎಂದು ಆರೋಪಿಸಿದ್ದಾರೆ.