ಸೋಮವಾರಪೇಟೆ,ಆ.12: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ದನ ಮಾಂಸದ ಮಳಿಗೆಯನ್ನು ಪ್ರಾರಂಭಿಸುವದಾಗಿ ಸಾರ್ವಜನಿಕ ವಾಗಿ ಹೇಳಿಕೆ ನೀಡಿರುವ ನಗರ ಸಭಾ ಸದಸ್ಯ ಅಮೀನ್ ಮೊಹಿಸಿನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೋಮವಾರಪೇಟೆ ತಾಲೂಕು ಬಿಜೆಪಿ ಘಟಕ ಆಗ್ರಹಿಸಿದೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಪಕ್ಷದ ತಾಲೂಕು ವಕ್ತಾರ ಕೆ.ಜಿ. ಸುರೇಶ್ ಮಾತನಾಡಿ, ಎಸ್.ಡಿ.ಪಿ.ಐ. ಪಕ್ಷವನ್ನು ಪ್ರತಿನಿಧಿಸುತ್ತಿರುವ ನಗರ ಸಭಾ ಸದಸ್ಯ ಅಮೀನ್ ಮೊಹಿಸೀನ್ ಶಾಂತಿ ಪ್ರಿಯ ಕೊಡಗು ಜಿಲ್ಲೆಯಲ್ಲಿ ಕೋಮು ಪ್ರಚೋದನೆ ಮಾಡಲು ಮುಂದಾಗಿದ್ದಾರೆ. ದನ ಮಾಂಸದ ಮಳಿಗೆಯನ್ನು ಪ್ರಾರಂಭಿಸುವ ಅವರ ಕನಸು ಕನಸಾಗಿಯೇ ಉಳಿಯಲಿದೆ. ಯಾವದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವದಿಲ್ಲ ಎಂದರು.

ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್‍ರವರು ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಬಿಡುಗಡೆಯಾಗುವ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುತ್ತಾರೆ. ರಾಜ್ಯ ಸರ್ಕಾರದ ಯೋಜನೆಗಳಿಗೆ ಬಿಜೆಪಿಯವರು ತಮ್ಮದು ಎಂದು ಹೇಳುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಲೋಕೇಶ್ ಆರೋಪಿಸುತ್ತಿರುವದರಲ್ಲಿ ಹುರುಳಿಲ್ಲ. ಸಂವಿಧಾನದತ್ತವಾಗಿ ಶಾಸಕರಿಗೆ ಬರುವ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿಯವರು ದಲಿತ ವಿರೋಧಿಗಳು ಎಂದು ಬೊಬ್ಬೆ ಹೊಡೆಯುವ ಕೆ.ಎಂ. ಲೋಕೇಶ್, ಕೊಡಗು ಜಿಲ್ಲೆಯ ಕಣ್ಣಂಗಾಲ ಪಂಚಾಯಿತಿಯಲ್ಲಿ ತಮ್ಮದೇ ಪಕ್ಷದ ಮುಖಂಡ ಗೋಪಾಲಕೃಷ್ಣ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಪರಿಶಿಷ್ಟ ಜಾತಿಯ ಮಹಿಳೆಯನ್ನು ಜೀತಕ್ಕೆ ಇರಿಸಿಕೊಂಡಿದ್ದ ಬಗ್ಗೆ ಯಾಕೆ ಮಾತನಾಡುವದಿಲ್ಲ. ಇದು ದಲಿತ ವಿರೋಧ ನೀತಿಯಲ್ಲವೇ? ಬೇರೆ ರಾಜ್ಯದ ಘಟನೆಗಳ ಬಗ್ಗೆ ಮಾತನಾಡುವ ಲೋಕೇಶ್ ಅವರು ಕೊಡಗಿನಲ್ಲಿಯೇ ನಡೆದ ಇಂತಹ ಅಮಾನವೀಯ ಘಟನೆ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವು ಆಗಸ್ಟ್ 13ರಿಂದ 23ರವರೆಗೆ ರಾಷ್ಟ್ರಾಭಿಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಶನಿವಾರದಂದು ಹಾಸನದಿಂದ ಶನಿವಾರಸಂತೆಗೆ ಬೃಹತ್ ರಥಯಾತ್ರೆ ಆಗಮಿಸಲಿದ್ದು, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ 15ರ ಸೋಮವಾರದಂದು ಸಂಜೆ 6 ಗಂಟೆಗೆ ಸೋಮವಾರಪೇಟೆಯ ವಿವೇಕಾನಂದ ವೃತ್ತದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಯಲಿದೆ ಎಂದರು.

ನಂತರದ ದಿನಗಳಲ್ಲಿ ಯುವ ಮೋರ್ಚಾ, ಮಹಿಳಾ ಮೋರ್ಚಾ ವಿಭಾಗಗಳಿಂದ ವಿವಿಧ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ.ಎಲ್ಲಾ ಕಾರ್ಯಕ್ರಮಗಳಲ್ಲೂ ಪಕ್ಷದ ಧ್ವಜವನ್ನು ಬಳಸದೆ ರಾಷ್ಟ್ರ ಧ್ವಜವನ್ನು ಬಳಸುವಂತೆ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ತಿಳಿಸಿದ್ದಾರೆ ಎಂದರು. ಗೋಷ್ಠಿಯಲ್ಲಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಉಪಸ್ಥಿತರಿದ್ದರು.