ಮಡಿಕೇರಿ, ಡಿ. 19: ಇತ್ತೀಚಿನ ದಿನಗಳಲ್ಲಿ ದಡಾರ-ರುಬೆಲ್ಲಾ ಎಂಬ ವೈರಸ್ ಕಾಣಿಸಿಕೊಳ್ಳುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪಲ್ಸ್ ಪೋಲಿಯೋ ಮಾದರಿಯಲ್ಲಿ ಫೆಬ್ರವರಿ 7 ರಿಂದ ದಡಾರ-ರುಬೆಲ್ಲಾ ಲಸಿಕಾ ಅಭಿಯಾನವನ್ನು ಜಿಲ್ಲೆಯಾದ್ಯಂತ ಶಾಲೆಗಳಲ್ಲಿ ಆರಂಭಿಸಲಾಗುತ್ತಿದ್ದು, ಈ ಲಸಿಕಾ ಕಾರ್ಯಕ್ರಮ ಯಶಸ್ಸಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದ ದಡಾರ-ರುಬೆಲ್ಲಾ ಲಸಿಕಾ ಅಭಿಯಾನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಫೆಬ್ರವರಿ 7 ರಿಂದ ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಆರಂಭಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಾರ್ವಜನಿಕ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಸರ್ಕಾರ ಶಿಕ್ಷಣ, ಆರೋಗ್ಯ, ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಿದೆ. ಆ ನಿಟ್ಟಿನಲ್ಲಿ ಉತ್ತಮ ಬದುಕಿಗೆ ಒಳ್ಳೆಯ ಆರೋಗ್ಯ ಹೊಂದಿರಬೇಕು. ಹಾಗಾದಾಗ ಮಾತ್ರ ಚಟುವಟಿಕೆಯಿಂದ ಇರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ಮಾತನಾಡಿ, ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಆರೋಗ್ಯ ಇಲಾಖೆ, ಅಧಿಕಾರಿ ಹಾಗೂ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಲಸಿಕೆ ನೀಡುವದಕ್ಕೆ ಸಂಬಂಧಿಸಿದಂತೆ ಅಗತ್ಯ ರೂಪುರೇಷೆಗಳನ್ನು ತಯಾರಿಸಿ ಜವಾಬ್ದಾರಿಯಾಗಿ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ಯುತವಾಗಿ ಕಾರ್ಯನಿರ್ವಹಿಸಿ ಎಂದರು.

ಜಿಲ್ಲೆಯಲ್ಲಿ 9 ತಿಂಗಳಿನಿಂದ 15 ವರ್ಷದ ಒಳಗಿನ ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆಯನ್ನು ನೀಡುತ್ತಿದ್ದು, ಶಾಲೆಗಳಲ್ಲಿ ಈ ಬಗ್ಗೆ ಅಗತ್ಯ ತಯಾರಿ ಮಾಡಿಕೊಳ್ಳ ಬೇಕಿದೆ ಎಂದು ಅವರು ಸಲಹೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜ ಮಾತನಾಡಿ, ದಡಾರ-ರುಬೆಲ್ಲಾ ಲಸಿಕಾ ಕಾರ್ಯಕ್ರಮ ಶಾಲೆಯಲ್ಲಿ ನಡೆಯುವದರಿಂದ ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಈ ನಿಟ್ಟಿನಲ್ಲಿ ಸಹಕರಿಸಬೇಕು. ಶಿಕ್ಷಕರು ಹಾಗೂ ಮಕ್ಕಳಿಗೆ ಮನವರಿಕೆ ಆಗುವ ಹಾಗೆ ಲಸಿಕೆಯ ಉಪಯೋಗ ಮತ್ತು ಉದ್ದೇಶಗಳ ಬಗ್ಗೆ ತಿಳಿ ಹೇಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯವರು ಸಹಕರಿಸುವಂತೆ ಆಗಬೇಕು ಹಾಗೂ ಈ ಸಂಬಂಧ ತಾಲೂಕಿನ ಬಿ.ಇ.ಓ. ಅಧಿಕಾರಿ ಗಳೊಂದಿಗೆ ಸಭೆ ನಡೆಸಲಾಗುವದು ಎಂದು ಮಾಹಿತಿ ನೀಡಿದರು.

ಡಾ. ಕೃಷ್ಣನಂದ ಮಾತನಾಡಿ, ದಡಾರ-ರುಬೆಲ್ಲಾ ಖಾಯಿಲೆಗಳು ಇತ್ತೀಚೆಗೆ ಕಂಡುಬರುತ್ತಿದ್ದು, ಈ ಬಗ್ಗೆ ಜನ ಸಾಮಾನ್ಯರಲ್ಲಿ ಮಾಹಿತಿ ಅಗತ್ಯ. ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಲಸಿಕೆ ನೀಡುವದರಿಂದ ಭವಿಷ್ಯದಲ್ಲಿ ಉಂಟಾಗುವ ದುಷ್ಪರಿಣಾಮಗಳಿಂದ ದೂರವಿರಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸರ್ವೇಕ್ಷಣಾಧಿಕಾರಿ ಡಾ. ಸತೀಶ್ ಚಂದ್ರ, ಡಾ. ರಾಮಚಂದ್ರ ಕಾಮಂತ್ ಅವರು ದಡಾರ-ರುಬೆಲ್ಲಾ ಲಸಿಕೆ ಬಗ್ಗೆ ಮಾಹಿತಿ ನೀಡಿದರು. ಆರ್‍ಸಿಹೆಚ್ ಅಧಿಕಾರಿ ಡಾ. ಎಂ.ಎನ್. ನಿಲೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದಡಾರ-ರುಬೆಲ್ಲಾ ಕಂಡುಬರುತ್ತಿದ್ದು, ಇದರಿಂದಾಗಿ ಅಂಗವಿಕಲತೆ ಉಂಟಾಗುತ್ತಿದ್ದು, ಇದನ್ನು ತಡೆಯಲು ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ. ದೇವಿ ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಮ್ತಾಜ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿಗಳು ಹಾಜರಿದ್ದರು.