ಶ್ರೀಮಂಗಲ, ಅ. 21: ದಕ್ಷಿಣ ಕೊಡಗಿನ ಬಾಳೆಲೆ ಹಾಗೂ ನಿಟ್ಟೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳಿನಿಂದ ಮರುಕಳಿಸಿರುವ ಹುಲಿ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹುಲಿ ಸೆರೆಗೆ ಗುರುವಾರದಿಂದ ಆರಂಭವಾಗಿರುವ ಕೂಂಬಿಂಗ್ ಕಾರ್ಯಾಚರಣೆ ಶುಕ್ರವಾರವು ಮುಂದುವರೆದಿದೆ. ಎರಡು ದಿನದ ಕಾರ್ಯಾಚರಣೆಯಲ್ಲಿ ಹುಲಿ ಎಲ್ಲಿಯೂ ಪ್ರತ್ಯಕ್ಷವಾಗಿಲ್ಲ. ಆದ್ದರಿಂದ ಕಾರ್ಯಾಚರಣೆ ಹುಲಿ ಸೆರೆಹಿಡಿಯುವವರೆಗೆ ಮುಂದುವರಿ ಯಲಿದೆ ಎಂದು ಹುಣಸೂರು ಮುಖ್ಯ ಅರಣ್ಯ ಸಂರಕ್ಷಣಧಿಕಾರಿ ಮಣಿಕಂಠನ್ ಅವರು ತಿಳಿಸಿದ್ದಾರೆ.

ಬಾಳೆಲೆ ನಿಟ್ಟೂರು ವ್ಯಾಪ್ತಿಯಲ್ಲಿ ಹುಲಿ ಹಾವಳಿ ಮಿತಿ ಮೀರಿದ್ದು Pಹುಲಿ ಸೆರೆಗೆ ಬೋನು ಇರಿಸಿ ಕೈಗೊಂಡ ಕಾರ್ಯಾಚರಣೆ ವಿಫಲವಾಗಿತ್ತು. ಈ ಹಿನೆÀ್ನಲೆಯಲ್ಲಿ ಸ್ಥಳೀಯ ಜನರು ಹಾಗೂ ಜನಪ್ರತಿನಿಧಿಗಳ ಆಗ್ರಹದಿಂದ ಹುಲಿಯನ್ನು ಅರವಳಿಕೆ ಮೂಲಕ ಸೆರೆ ಹಿಡಿಯಲು ಅನುಮತಿ ದೊರೆತ ಹಿನ್ನಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಆನೆ ಮಾವುತರು ಹಾಗೂ ಕಾವಾಡಿಗಳು ಸೇರಿ ಸುಮಾರು 12 ಜನರ ತಂಡ ಕಾರ್ಯಾಚರಣೆ ಕೈಗೊಂಡಿದ್ದಾರೆ. ಕಾರ್ಯಾಚರಣೆಗೆ 3 ಆನೆಗಳನ್ನು ಬಳಸಿಕೊಳ್ಳಲಾಗಿದೆ. ಆನೆಗಳಾದ ಧ್ರೋಣ, ಗೋಪಾಲಸ್ವಾಮಿ ಹಾಗೂ ಮಹರಾಷ್ಟ್ರದ ಭೀಮ ಪಾಲ್ಗೊಂಡಿದ್ದು ಶನಿವಾರ (ಇಂದು) ಮತ್ತಿಗೋಡಿನ ಭೀಮಾ ಮತ್ತು ಕೃಷ್ಣ ಕಾರ್ಯಾ ಚರಣೆಯಲ್ಲಿ ಸೇರಿಕೊಳ್ಳಲಿದ್ದಾರೆ.

ಶುಕ್ರವಾರದ ಕಾರ್ಯಾ ಚರಣೆಯಲ್ಲಿ ಎರಡು ದಿನದ ಹಿಂದೆ ಹುಲಿ ಧಾಳಿ ಮಾಡಿದ ಸ್ಥಳವಾದ ದೇವನೂರು ಗ್ರಾಮದ ಅಳಮೇಂಗಡ ರಿವಿನಾ ಮೇದಪ್ಪ, ಲಕ್ಷ್ಮಿಕಾಂತ್ ಅವರ ಜಾಗಗಳಿಂದ ಪ್ರಾರಂಭವಾದ ಕೂಂಬಿಂಗ್ ದೇವನೂರು ಮಲ್ಲೂರು ಗ್ರಾಮದ ಲಕ್ಷ್ಮಣತೀರ್ಥ ನದಿಯ ಬದಿಯಲ್ಲಿ ಸಾಗಿದೆ. ನದಿಯ ಬದಿಯಲ್ಲಿ ಹುಲಿಗೆ ವಾಸ ಮಾಡಲು ತಂಪಾದ ಬಿದಿರಿನ ಸ್ಥಳ ಹಾಗೂ ಕುಡಿಯಲು ನೀರು ಲಭ್ಯತೆ ಇರುವ ದರಿಂದ ಈ ಜಾಗದಲ್ಲಿ ಬೀಡು ಬಿಟ್ಟಿರುವ ಸಾಧ್ಯತೆ ಹೆಚ್ಚಿರುವದನ್ನು ಮನಗಂಡು ಈ ಬದಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇದಲ್ಲದೇ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ನೀರ್‍ಕಟ್ಟೆ, ಕುಂಬರಕಟ್ಟೆ ವ್ಯಾಪ್ತಿಯಲ್ಲಿ ಕಾರ್ಯಾ ಚರಣೆ ಮುಂದುವರಿದಿದೆ.