ವೀರಾಜಪೇಟೆ, ಜು. 22: ಕಳೆದ ಐದು ದಿನಗಳಿಂದ ದಕ್ಷಿಣ ಕೊಡಗಿನಲ್ಲಿ ಮಳೆ ಕುಂಠಿತಗೊಂಡ ಪ್ರಯುಕ್ತ ಕೃಷಿ ಚಟುವಟಿಕೆಗಳತ್ತ ಗಮನ ಹರಿಸಿದ ರೈತರು ಬಿರುಸಿನ ನಾಟಿಗೆ ಚಾಲನೆ ನೀಡಿದ್ದಾರೆ.

ವೀರಾಜಪೇಟೆ ವಿಭಾಗದ ಕದನೂರು, ಕಡಂಗ, ಆರ್ಜಿ, ಬಿಟ್ಟಂಗಾಲ, ಬಾಳುಗೋಡು, ಪೆರುಂಬಾಡಿ, ಹೆಗ್ಗಳ, ಕೆದಮುಳ್ಳೂರು, ಪಾಲಂಗಾಲ ಸೇರಿದಂತೆ ವಿವಿಧೆಡೆಗಳಲ್ಲಿ ಮಳೆ ಮಂದಗತಿಯಲ್ಲಿ ಸುರಿಯುತ್ತಿರುವದರಿಂದ ಬಿರುಸಿನ ನಾಟಿ ಕೆಲಸಕ್ಕೆ ಯಾವದೇ ಅಡಚಣೆಯಾಗಿಲ್ಲ.ಕದನೂರು, ಆರ್ಜಿ, ಬಿಟ್ಟಂಗಾಲ ಗ್ರಾಮದ ಗದ್ದೆ ಹಾಗೂ ಖಾಲಿ ಜಾಗಗಳಲ್ಲಿ ಭಾರೀ ಮಳೆಯಿಂದ ನೀರು ನಿಂತಿದ್ದು, ಈಗ ನೀರಿನ ಪ್ರಮಾಣ ಕಡಿಮೆಯಾಗಿರುವದರಿಂದ ನಾಟಿ ಕೆಲಸಕ್ಕೆ ಅನುಕೂಲವಾಗಿದೆ ಎಂದು ಈ ವಿಭಾಗದ ರೈತರು ತಿಳಿಸಿದ್ದಾರೆ.ವೀರಾಜಪೇಟೆ ವಿಭಾಗಕ್ಕೆ ತಾ. 22ರಂದು 12 ಮಿಮೀ, ಅಮ್ಮತ್ತಿ 10 ಮಿಮೀ, ಪೊನ್ನಂಪೇಟೆಗೆ 5.4 ಮಿಮೀ, ಶ್ರೀಮಂಗಲಕ್ಕೆ 49 ಮಿಮೀ, ಹುದಿಕೇರಿ 24.1 ಮಿಮೀ ಬಿಟ್ಟಂಗಾಲಕ್ಕೆ 10ಮಿಮೀ ಮಳೆ ಸುರಿದಿದೆ ಎಂದು ಇಲ್ಲಿನ ತಾಲೂಕು ಕಚೇರಿಯಲ್ಲಿ ಮಳೆ ಪ್ರಮಾಣ ದಾಖಲಾಗಿದೆ.

12 ಮನೆಗಳು ಜಖಂ

20016 ಜೂನ್, ಜುಲೈ ತಿಂಗಳಲ್ಲಿ ವೀರಾಜಪೇಟೆ ತಾಲೂಕಿಗೆ ಬಿದ್ದ ಭಾರೀ ಮಳೆಯ ಪರಿಣಾಮ ಇದುವರೆಗೆ ಒಟ್ಟು 12 ಮನೆಗಳು ಭಾಗಶ: ಜಖಂಗೊಂಡಿದೆ. ಇದರಿಂದ ರೂ 5ಲಕ್ಷದ 10,000 ನಷ್ಟ ಸಂಭವಿಸಿದೆ. ಒಂದು ಜಾನುವಾರು ಸಾವನ್ನಪ್ಪಿದ್ದು, ಇದರಿಂದ ರೂ. 27000 ಉಂಟಾಗಿದೆ. ಈ ಪೈಕಿ 5 ಮನೆಗಳ ಮಾಲೀಕರಿಗೆ ರೂ. 1 ಲಕ್ಷದ 2000 ಪರಿಹಾರ ನೀಡಲಾಗಿದೆ.

ಕೊಡಗು ಕೇರಳ ಗಡಿ ಪ್ರದೇಶ ಮಾಕುಟ್ಟದಲ್ಲಿಯು ಮಳೆ ಕುಂಠಿತಗೊಂಡಿದೆ. ಮಳೆಯಿಂದ ಹೆದ್ದಾರಿ ರಸ್ತೆ ಸಂಚಾರಕ್ಕೆ ಈ ತನಕ ಯಾವದೇ ಅಡಚಣೆಯಾಗಿಲ್ಲವೆಂದು ಲೋಕೋಪಯೋಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಇಲಾಖೆ ಅಧಿಕಾರಿಗಳ ತಂಡ ಮಾಕುಟ್ಟದವರೆಗೆ ತೆರಳಿ ರಸ್ತೆಯಲ್ಲಿ ವಾಹನ ಸುಗಮ ಸಂಚಾರದ ಬಗ್ಗೆ ಪರಿಶೀಲನೆ ನಡೆಸಿತು. ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಗಡಿ ಪ್ರದೇಶದ ಹೆದ್ದಾರಿ ರಸ್ತೆಯಲ್ಲಿ ಅನಾಹುತ ಸಂಭವಿಸುತ್ತಿರುವದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳ ತಂಡ ಗಡಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.