ಭಾಗಮಂಡಲ, ಆ.2: ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಕಾವೇರಿ ನದಿಗೆ ಬಾಳೆದಿಂಡಿನ ಬಾಗಿನ ಅರ್ಪಿಸಲಾಯಿತು.ಮಹಾಪೂಜೆಯ ಬಳಿಕ ಬಾಳೆದಿಂಡಿನಿಂದ ಮಾಡಿದ ಮಂಟಪಕ್ಕೆ ಪೂಜೆ ಸಲ್ಲಿಸಿ, ಮುತ್ತೈದೆಯರು ಬಳಸುವಂತಹ ವಸ್ತುಗಳಾದ ಚಿನ್ನದ ಮಾಂಗಲ್ಯ, ಕರಿಮಣಿ ಸರ, ಬಳೆ, ಸೀರೆ, ಅರಸಿನ, ಕುಂಕುಮಗಳನ್ನಿಟ್ಟು ದೇವಾಲಯಕ್ಕೆ ಪ್ರದಕ್ಷಿಣೆ ಬಂದು ತ್ರಿವೇಣಿ ಸಂಗಮಕ್ಕೆ ತೆರಳಿ ಪೂಜೆ ಸಲ್ಲಿಸಿ ತ್ರಿವೇಣಿ ಸಂಗಮದಲ್ಲಿ ಬಾಳೆದಿಂಡಿನ ಮಂಟಪವನ್ನು ಬಿಡಲಾಯಿತು.ಕಾವೇರಿಯು ಉಕ್ಕಿ ಹರಿಯುತ್ತಿದ್ದಾಗ ಶಾಂತಗೊಳ್ಳಲಿ ಎಂಬ ನಿಟ್ಟಿನಲ್ಲಿ ಹಿಂದಿನಿಂದಲೂ ಸಾಂಪ್ರ್ರದಾಯಿಕವಾಗಿ ಪ್ರತೀ ವರ್ಷ ಪೊಲಿಂಕಾನ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ವಿಧಿ ವಿಧಾನಗಳು ರವಿಭಟ್ ಅವರ ನೇತೃತ್ವದಲ್ಲಿ ನಡೆಯಿತು. ಪೂಜಾ ಕೈಂಕರ್ಯದಲ್ಲಿ ತಕ್ಕರಾದ ಕೋಡಿ ಮೋಟಯ್ಯ, ಬಳ್ಳಡ್ಕ ಅಪ್ಪಾಜಿ, ಪಾಡಿ ಇಗ್ಗುತ್ತಪ್ಪ ದೇವಾಲಯದ ಅರ್ಚಕ ಕುಶಭಟ್, ಕಂದಾಯಾಧಿಕಾರಿ ರಾಮಯ್ಯ, ದೇವಾಲಯದ ಕಾರ್ಯನಿರ್ವಹಣಾಧಿ ಕಾರಿ ಜಗದೀಶ್‍ಕುಮಾರ್, ಪಾರುಪತ್ತೆಗಾರರಾದ ಪೊನ್ನಣ್ಣ, ಪಾಪಯ್ಯ, ಚಿ.ನಾ. ಸೋಮೇಶ್, ಹಾಗೂ ಮತ್ತಿತರರು ಇದ್ದರು.