ಸುಂಟಿಕೊಪ್ಪ, ನ. 29: ವಿದ್ಯಾರ್ಥಿಗಳು ಪರಿಸರ ಪ್ರಜ್ಞೆ ಬೆಳೆಸಿಕೊಂಡು ಗ್ರಾಮೀಣ ಜನರಲ್ಲಿ ಕಸದ ಸೂಕ್ತ ನಿರ್ವಹಣೆ ಹಾಗೂ ಘನತ್ಯಾಜ್ಯ ವಸ್ತುಗಳ ಪುನರ್ಬಳಕೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಾಲಕೃಷ್ಣ ಹೇಳಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಡಗು ಪ್ರಾದೇಶಿಕ ಕಚೇರಿ ಆಶ್ರಯದಲ್ಲಿ ಜರುಗಲಿರುವ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಅಂಗವಾಗಿ ಪರಿಸರ ಸಂರಕ್ಷಣೆಗಾಗಿ “ಘನತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ”ಎಂಬ ಕುರಿತು ವಿದ್ಯಾರ್ಥಿಗಳು ನಡೆಸಿದ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಸದ ನಿರ್ವಹಣೆ ಬಗ್ಗೆ ಎಲ್ಲರೂ ಹೆಚ್ಚಿನ ನಿಗಾ ವಹಿಸಿದರೆ ಪರಿಸರವನ್ನು ಶುಚಿಯಾಗಿಡಲು ಸಾಧ್ಯವಾಗುತ್ತದೆ ಎಂದರು. ಮಕ್ಕಳು ಕೈಗೊಂಡಿರುವ ಯೋಜನೆಯ ಮಾರ್ಗದರ್ಶಿ ಶಿಕ್ಷಕರೂ ಆದ ಶಾಲೆಯ ಇಕೋ ಕ್ಲಬ್ನ ಸಂಚಾಲಕ ಟಿ.ಜಿ. ಪ್ರೇಮಕುಮಾರ್ , ಕಸದ ಸೂಕ್ತ ನಿರ್ವಹಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಮಕ್ಕಳು ಸಮೀಕ್ಷಾ ಕಾರ್ಯ ಕೈಗೊಂಡು ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿ, ಕಸದ ಸೂಕ್ತ ನಿರ್ವಹಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಕಸದ ನಿರ್ವಹಣೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದರು. ‘ಘನತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ’ ಉಪ ಶೀರ್ಷಿಕೆಯಡಿ ಮಾರ್ಗದರ್ಶಿ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ತಂಡದ ನಾಯಕ ಬಿ. ಕೃತಿಕ್ ನೇತೃತ್ವದ ವಿದ್ಯಾರ್ಥಿಗಳ ತಂಡವು ಸುಂಟಿಕೊಪ್ಪ ಪಟ್ಟಣದಲ್ಲಿ ಮನೆ ಮನೆಗಳಿಗೆ ತೆರಳಿ ಪ್ರತಿನಿತ್ಯ ಮನೆಗಳಲ್ಲಿ ಉತ್ಪತ್ತಿಯಾಗುವ ಗೃಹತ್ಯಾಜ್ಯ ವಸ್ತುಗಳನ್ನು ಹೇಗೆ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ ಎಂಬ ಬಗ್ಗೆ ವಿದ್ಯಾರ್ಥಿಗಳ ಅಧ್ಯಯನ ತಂಡವು ಮಾಹಿತಿ ಕಲೆ ಹಾಕಿತು.
ಇದೇ ವೇಳೆ ಅಂಗಡಿ ಮುಗ್ಗಟ್ಟು, ಹೊಟೇಲ್, ಬೇಕರಿ, ಕಚೇರಿಗಳು, ಹಾಗೂ ಸಾಂಸ್ಥಿಕ ಸಂಸ್ಥೆಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಎಲ್ಲಾ ಸ್ಥಳಗಳಲ್ಲಿ ಕಸ ಹೇಗೆ ಉತ್ಪತ್ತಿಯಾಗುತ್ತಿದೆ, ಕಸವನ್ನು ಹೇಗೆ ಸಂಗ್ರಹಿಸಿ ವಿಲೇವಾರಿ ಮತ್ತು ಪುನರ್ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ಸಂಗ್ರಹಿಸಿದರು.
ಗಟ್ಟಿ ಕಸದ ನಿರ್ವಹಣೆಗಾಗಿ ವೈಜ್ಞಾನಿಕ ಯೋಜನಾ ವರದಿ ತಯಾರಿಕೆಗಾಗಿ ನಡೆಸಿದ ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಪಿಡಿಓ ಸುಮೇಶ್ ಅವರನ್ನು ಸಂದರ್ಶಿಸಿದಾಗ, ಗ್ರಾಮದಲ್ಲಿ ಪ್ರಸ್ತುತ ಕಸದ ತೊಟ್ಟಿಗಳ ಮೂಲಕ ಕಸ ಸಂಗ್ರಹಿಸಲಾಗುತ್ತಿದ್ದು, ಕಸವನ್ನು ಮನೆ ಮತ್ತು ಅಂಗಡಿಗಳಿಂದ ಮುಂದಿನ ದಿನಗಳಲ್ಲಿ ಜೈವಿಕ ಮತ್ತು ಅಜೈವಿಕ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ ಪುನರ್ಬಳಕೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು. ನಂತರ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಾಣೇಶ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದ ವಿದ್ಯಾರ್ಥಿಗಳ ತಂಡವು ಕಸವನ್ನು ಎಲ್ಲೆಂದರಲ್ಲಿ ಬಿಸಾಕಿದರೆ ಮಾಲಿನ್ಯವುಂಟಾಗಿ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ. ಈ ದಿಸೆಯಲ್ಲಿ ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂಬ ಮಾಹಿತಿ ಪಡೆಯಿತು.
ಜಾಗೃತಿ ಜಾಥಾದಲ್ಲಿ ಜನರಲ್ಲಿ ಕಸದ ಸೂಕ್ತ ವಿಲೇವಾರಿ ಮಾಡುವ ಬಗ್ಗೆ ಕರಪತ್ರಗಳನ್ನು ಹಂಚುವ ಮೂಲಕ ಅವರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ವಿದ್ಯಾರ್ಥಿಗಳ ಅಧ್ಯಯನ ತಂಡದಲ್ಲಿ ನಾಯಕ ಕೃತಿಕ್ ಜತೆಗೆ ಸದಸ್ಯರಾದ ಆದಿತ್ಯ, ಅಭಿಷೇಕ್, ದರ್ಶನ್, ಜಯಪ್ರಕಾಶ್ ಯೋಜನೆ ತಯಾರಿಸಲು ನೆರವಾದರು.