ಮಡಿಕೇರಿ, ಜ. 25: ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಪ್ರದರ್ಶನ ಕಾಣುತ್ತಿದ್ದ ಕೊಡವ ಭಾಷಾ ಚಲನಚಿತ್ರ ‘ತೆಳ್‍ಂಗ್ ನೀರ್’ ಚಿತ್ರ ಪ್ರದರ್ಶನ ಇಂದಿನಿಂದ ರದ್ದು ಗೊಂಡಿದೆ.

ನಗರಸಭೆಯ ಆಯುಕ್ತರಿಂದ ಚಿತ್ರ ತಂಡದ ಮನವಿಗೆ ಸ್ಪಂದನ ಸಿಗದ ಕಾರಣ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಜನವರಿ 15 ರಿಂದ 21ರವರೆಗೆ ಈ ಚಿತ್ರ ಪ್ರದರ್ಶನಕ್ಕೆ ಕಾವೇರಿ ಕಲಾಕ್ಷೇತ್ರವನ್ನು ಚಿತ್ರ ತಂಡ ಪಡೆದುಕೊಂಡಿತ್ತು. ಈ ನಡುವೆ ಪ್ರಾದೇಶಿಕ ಭಾಷಾ ಚಿತ್ರ ವೀಕ್ಷಣೆಗೆ ಅಚ್ಚರಿ ಎಂಬಂತೆ ಜನತೆ ನಿರೀಕ್ಷೆಗೂ ಮೀರಿ ನಗರ ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಚಿತ್ರ ಪ್ರದರ್ಶನವನ್ನು ತಾ. 31ರವರೆಗೆ ಮುಂದುವರಿಸಲು ಅನುಮತಿ ಕೋರಿ ಮನವಿ ಸಲ್ಲಿಸಲಾಗಿತ್ತು. ಆದರೆ ತಾ. 26ರ ಗಣರಾಜ್ಯೋತ್ಸವದ ಪ್ರಯುಕ್ತದ ಕಾರ್ಯಕ್ರಮಕ್ಕೆ ಕಲಾಕ್ಷೇತ್ರವನ್ನು ತಾ. 25ರಂದೇ ಬಿಟ್ಟುಕೊಡಬೇಕೆಂದು ನಗರ ಸಭಾ ಆಯುಕ್ತರ ಕಚೇರಿಯಿಂದ ಒತ್ತಡ ಬಂದಿತ್ತು.

ಈ ಬಗ್ಗೆ ತಾ. 26ರ ಕಾರ್ಯಕ್ರಮಕ್ಕೆ ಸಹಕರಿಸಿ ಚಿತ್ರ ಪ್ರದರ್ಶನವನ್ನು ಮುಂದುವರಿಸುವ ಕುರಿತು ತಂಡ ಪ್ರಯತ್ನ ನಡೆಸಿತ್ತು. ನಗರದ ಪ್ರಮುಖರು ಹಾಗೂ ನಗರ ಸಭೆಯ ಬಹುತೇಕರು ಪ್ರಯತ್ನ ಪಟ್ಟರೂ ಮನವಿಗೆ ಸ್ಪಂದನ ಸಿಗದ ಕಾರಣ ತಾ. 25 ರಂದು ಬೆಳಗ್ಗಿನ ಪ್ರದರ್ಶನದ ನಂತರ ಚಿತ್ರ ತಂಡ ಗಂಟು ಮೂಟೆ ಕಟ್ಟಬೇಕಾಗಿ ಬಂದಿತು. ಈ ಕುರಿತು ಮಾಧ್ಯಮಗಳಿಗೆ ಈ ಮೇಲ್ ಸಂದೇಶ ಕಳುಹಿಸಿರುವ ಚಿತ್ರ ನಿರ್ದೇಶಕ ಗೋಪಿ ಪೀಣ್ಯ ಅವರು, ಎಲ್ಲರ ಪ್ರೀತಿ, ಸಹಾಯ, ಸಹಕಾರ ದಿಂದ ಚಿತ್ರ ಜನರನ್ನು ಮುಟ್ಟಲು ಸಾಧ್ಯವಾಗಿದೆ. ಜನರ ಸ್ಪಂದನ ಮರೆಯುವದಿಲ್ಲ. ಮುಂದೆ ವೀರಾಜಪೇಟೆ ಹಾಗೂ ಗೋಣಿಕೊಪ್ಪಲುವಿನಲ್ಲಿ ಚಿತ್ರ ಪ್ರದರ್ಶನಕ್ಕೆ ಯೋಜನೆ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ. ಇದರೊಂದಿಗೆ ಮಡಿಕೇರಿ ನಗರದಲ್ಲಿ ಜನಾಕರ್ಷಣೆ ಪಡೆಯುತ್ತಿದ್ದ ತೆಳ್‍ಂಗ್ ನೀರ್ ಚಿತ್ರ ಪ್ರದರ್ಶನ ಸ್ಥಗಿತಗೊಂಡಂತಾಗಿದೆ.