ಸಿದ್ದಾಪುರ, ನ. 19: ಚೀನಾ ಅಕ್ಕಿ... ಚೀನಾ ಮೊಟ್ಟೆ ಮುಂತಾದವುಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲಾ ಆಹಾರ ಪದಾರ್ಥವನ್ನು ಪರಿಶೀಲಿಸಿ ಪಡೆಯುತ್ತೇವೆ. ತೆಂಗಿನ ಎಣ್ಣೆಯನ್ನೂ ಕೂಡ ಕೇರಳದ ಒಳ್ಳೆಯ ತೆಂಗಿನ ಎಣ್ಣೆ ಎಂದು ನಾವು ಕೊಂಡುಕೊಳ್ಳುತ್ತೇವೆ. ಆದರೆ ತೆಂಗಿನ ಎಣ್ಣೆಯಲ್ಲಿ ಮೇಣ ಮಿಶ್ರಿತ ಎಣ್ಣೆಯನ್ನು ನೋಡಿದ್ದಿರಾ? ಅಚ್ಚರಿಪಡಬೇಡಿ.. ಇದು ನಿಜ..!!

ನೆಲ್ಲಿಹುದಿಕೇರಿಯ ನಿವಾಸಿ ಶಾಜಿ ಎಂಬವರು ಸಿದ್ದಾಪುರದ ಅಂಗಡಿಯೊಂದರಲ್ಲಿ ಅರ್ಧ ಲೀಟರ್‍ನ ತೆಂಗಿನ ಎಣ್ಣೆಯನ್ನು ಪಡೆದಿದ್ದು, ಮನೆಗೆ ತೆರಳಿ ಅಡುಗೆ ಮಾಡಲು ಮುಂದಾಗುವಾಗ ಸಂಪೂರ್ಣ ಮೇಣ ಮಿಶ್ರಿತವಾಗಿರುವದು ಕಂಡು ಬಂದಿದೆ. ತೆಂಗಿನ ಎಣ್ಣೆಯ ಪ್ಯಾಕೆಟ್‍ನಲ್ಲಿ ಅಗ್‍ಮಾರ್ಕ್ ಬಳಸಲಾಗಿದ್ದು, ಪರಿಶುದ್ಧ ತೆಂಗಿನ ಎಣ್ಣೆ ಎಂದು ಬರೆದು ಜನರನ್ನು ಮೋಸ ಮಾಡುತ್ತಿರುವದು ಬೆಳಕಿಗೆ ಬಂದಿದೆ.

ಕೇರಳದ ಕಣ್ಣನೂರಿನ ‘ಡಬಲ್ ಕುಕ್ ಬ್ರಾಂಡ್’ ಎಂಬ ತೆಂಗಿನ ಎಣ್ಣೆಯಲ್ಲಿ ಮೇಣ ಪತ್ತೆಯಾಗಿದ್ದು, ಕವರ್‍ನಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ, ಮೇಣ ಇರಲು ಸಾಧ್ಯವೇ ಇಲ್ಲವೆಂದು ಕಂಪೆನಿಯವರು ಹೇಳುತ್ತಾರೆ ಎಂದು ಶಾಜಿ ತಿಳಿಸಿದ್ದಾರೆ.

ಏನೇ ಆದರೂ ಕಳಪೆ ಗುಣಮಟ್ಟದ ತೆಂಗಿನ ಎಣ್ಣೆ ತಯಾರಿಸಿ, ಮಾರಾಟ ಮಾಡಿ ಜನರ ಆರೋಗ್ಯವನ್ನು ಕೆಡಿಸಲು ಮುಂದಾಗಿರುವ ಇಂತಹಾ ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಲಿ ಎಂಬದು ಸಾರ್ವಜನಿಕರ ಆಗ್ರಹ.

- ಆರ್.ಕೆ.ಜಿ.