ನಾಪೋಕ್ಲು, ಅ. 26: ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ತುಲ್ಯಾರು 10ರ ಆರಾಧನೋತ್ಸವ ಪತ್ತಲೋದಿ ಹಬ್ಬವು ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಪರದಂಡ ಮನೆಯಿಂದ ಹಾಲು ಬಲಿವಾಡು ತರುವದರೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಭಕ್ತರು ಮಳೆ ಬೆಳೆಗಾಗಿ ದೇವರನ್ನು ಪ್ರಾರ್ಥಿಸಿದರು. ಉತ್ಸವದ ಅಂಗವಾಗಿ ಆರು ತುಲಾಭಾರ ಸೇವೆಗಳು ಜರುಗಿದವು. ಭಕ್ತರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ವಿಶೇಷ ಪೂಜೆ ನೆರವೇರಿತು. ನಂತರ ನಡೆದ ದೇವರ ನೃತ್ಯಬಲಿಯ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.