ಮಡಿಕೇರಿ, ಜ. 9: ಮಾದಾಪುರ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸಿಗದೆ ನಾಲ್ಕು ತಿಂಗಳಲ್ಲಿ ಮೂರು ಜೀವಗಳು ಬಲಿಯಾಗಿವೆ. ಇಲ್ಲಿನ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ವೀರೇಂದ್ರ ಕುಮಾರ್ ಅವರನ್ನು ವಾರಕ್ಕೆ ಎರಡು ಬಾರಿ ಕುಶಾಲನಗರ ಆಸ್ಪತ್ರೆಗೆ ಕರ್ತವ್ಯಕ್ಕೆ ನಿಯೋಜಿಸ ಲ್ಪಟ್ಟಿದ್ದು, ಇದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಅನಾರೋಗ್ಯದಿಂದ ಆಸ್ಪತ್ರೆಗೆ ಬರುವ ವೇಳೆ ವೈದ್ಯರಾದ ವೀರೇಂದ್ರ ಕುಮಾರ್ ಅವರಿದ್ದರೆ ರೋಗಿಯ ಪುಣ್ಯ. ಒಂದು ವೇಳೆ ಅವರು ಕುಶಾಲನಗರ ಆಸ್ಪತ್ರೆಯಲ್ಲಿದ್ದರೆ ದೇವರೆ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವೀರೇಂದ್ರಕುಮಾರ್ ಅವರನ್ನು ಮಾದಾಪುರ ಆಸ್ಪತ್ರೆಯಲ್ಲಿಯೆ ಕರ್ತವ್ಯಕ್ಕೆ ಅನುವು ಮಾಡಿಕೊಡುವಂತೆ ಹಲವು ಬಾರಿ ಸಂಬಂಧಿಸಿದವರ ಗಮನ ಸೆಳೆದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಪಂಚಾಯಿತಿ ಸದಸ್ಯ ಇಬ್ರಾಹಿಂ ಸೀದಿ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಎಸ್.ಕೆ. ಸುಂದರ್ ಇವರುಗಳು ಆರೋಪಿಸಿದ್ದಾರೆ.

ಇಂದು ಕೂಡ ಪಾಂಡ್ಯಮ್ಮ ಎಂಬವರ ಪುತ್ರ ಪೀಟರ್ (19) ಎಂಬಾತ ಹೊಟ್ಟೆನೋವಿನ ಹಿನ್ನೆಲೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟಿದ್ದು, ಕೂಡಲೇ ಸಂಬಂಧಿಸಿದವರು ಈ ಬಗ್ಗೆ ಗಮನ ಹರಿಸಬೇಕು. ಜೀವಗಳು ಬಲಿಯಾಗುವದನ್ನು ತಡೆಯಬೇಕು. ಮಾತ್ರವಲ್ಲದೆ ಮಾದಾಪುರದಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಆಸ್ಪತ್ರೆಯು ಒಂದು ವರ್ಷದಿಂದ ತೆರೆಯಲ್ಪಟ್ಟಿಲ್ಲ. ಆದ್ದರಿಂದ ಕೂಡಲೇ ಅದನ್ನು ಜನರ ಸೇವೆಗೆ ಒದಗಿಸಿಕೊಡಬೇಕೆಂದು ಇಬ್ರಾಹಿಂ ಸೀದಿ ಹಾಗೂ ಸುಂದರ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.