ಮಡಿಕೇರಿ, ನ.4: ತ್ರಿವೇಣಿ ಸಂಗಮ ಕ್ಷೇತ್ರವಾದ ಕೊಡಗಿನ ಭಾಗಮಂಡಲದಲ್ಲಿ ಶ್ರೀ ಕಾಶಿ ಮಠ ಸಂಸ್ಥಾನದ ವತಿಯಿಂದ ಸುಸಜ್ಜಿತ ಆಯುರ್ವೇದ ಸಸ್ಯ ವನ ರೂಪು ಗೊಂಡಿದ್ದು, 500 ವೈವಿಧ್ಯಮಯ ತಳಿಗಳ 5 ಸಾವಿರಕ್ಕೂ ಅಧಿಕ ಸಸಿಗಳ ವನ ಕಂಗೊಳಿಸುತ್ತಿದೆ. ತಾ. 6 ರಂದು ಶ್ರೀಮದ್ ಭುವನೇಂದ್ರ ಆಯುರ್ವೇದಿಕ್ ವೃಕ್ಷ ವಾಟಿಕಾ ಲೋಕಾರ್ಪಣೆಯಾಗಲಿದ್ದು, ಈ ಮೂಲಕ ತಲಕಾವೇರಿ - ಭಾಗಮಂಡಲ ಪುಣ್ಯ ಕ್ಷೇತ್ರದಲ್ಲಿ ಅಪೂರ್ವ ಸಸ್ಯಕಾಶಿಯು ಕಾಶಿ ಮಠದಿಂದ ಭಕ್ತರಿಗೆ ದೊರಕಿ ದಂತಾಗಿದೆ.

ಆಯುರ್ವೇದದ ಮಹತ್ವದ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ ಶ್ರೀ ಕಾಶಿ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಈ ನಿಟ್ಟಿನಲ್ಲಿ ಕಾವೇರಿ ತಾಣವಾದ ಭಾಗಮಂಡಲ ವನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಯೇ ತಮ್ಮ ಕನಸಿನ ಯೋಜನೆ ಯಾಗಿ ಆಯುರ್ವೇದ ವನವನ್ನು ರೂಪಿಸಿದ್ದಾರೆ.

ಈ ವನದ ಮೂಲಕ ಭವಿಷ್ಯತ್ತಿನಲ್ಲಿ ಆಯುರ್ವೇದದ ಅಪೂರ್ವ ಸಸ್ಯರಾಶಿಯನ್ನು ಸಂರಕ್ಷಿಸುವ ಉದ್ದೇಶ ಹೊಂದಲಾಗಿದೆ. ಭಾಗಮಂಡಲ ದಲ್ಲಿಯೂ ಶ್ರೀ ಕಾಶಿ ಮಠದ ಶಾಖೆಯು ಅದೀನದಲ್ಲಿಯೇ 16 ಎಕ್ರೆ ವಿಸ್ತಾರವಾದ ಭೂಮಿಯಲ್ಲಿ ಇದೀಗ ಸುಂದರ ಆಯುರ್ವೇದ ವನ ರೂಪುಗೊಂಡಿದೆ. ಭಾನುವಾರವೇ ವನದಲ್ಲಿನ ಆಕರ್ಷಕ ಮಂಟಪದಲ್ಲಿ ಅಳವಡಿತ ಭುವನೇಂದ್ರ ತೀರ್ಥ ಸ್ವಾಮೀಜಿಗಳ ಭವ್ಯ ಮೂರ್ತಿಯೂ ಅನಾವರಣಗೊಳ್ಳಲಿದೆ. ಶ್ರೀ ಕಾಶಿ ಮಠಾಧೀಶ ಸಂಯಮೀಂದ್ರ ತೀರ್ಥ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಶಿಲ್ಪಶಾಸ್ತ್ರ, ಜ್ಯೋತಿಷ್ಟ ಶಾಸ್ತ್ರದಲ್ಲಿ ಪ್ರಾವಿಣ್ಯತೆಯೊಂದಿಗೆ ಅಭಿನವ ಧನ್ವಂತರಿ

(ಮೊದಲ ಪುಟದಿಂದ) ಎಂದೇ ಖ್ಯಾತರಾಗಿ ಆಯುರ್ವೇದದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಶ್ರೀ ಕಾಶಿ ಮಠ ಸಂಸ್ಥಾನದ ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ 125 ನೇ ಪುಣ್ಯ ತಿಥಿ ಸಂದರ್ಭ 2011 ರಲ್ಲಿ ಅವರ ಸಂಸ್ಮರಣೆ ರೂಪದಲ್ಲಿ ಅಪರೂಪದ ಆಯುರ್ವೇದ ಮೂಲಿಕೆ ಮತ್ತು ಸಸ್ಯಗಳ ಆಯುರ್ವೇದ ಮೂಲಿಕ ವನ ರೂಪಿಸುವ ಇಚ್ಚೆಯನ್ನು ಅಂದಿನ ಪೀಠಾಧಿಪತಿ ಸುದೀಂದ್ರ ತೀರ್ಥ ಸ್ವಾಮೀಜಿ ವ್ಯಕ್ತಪಡಿಸಿದ್ದರು.

ತನ್ನ ಗುರುಗಳ ಪವಿತ್ರ ಆಶಯಕ್ಕೆ ಸ್ವರೂಪ ಮತ್ತು ಚಾಲನೆ ನೀಡುವ ನಿಟ್ಟಿನಲ್ಲಿ ಶ್ರೀ ಕಾಶಿ ಮಠಸಂಸ್ಥಾನದ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿನ 50 ಎಕ್ರೆ ಜಾಗದ ಪೈಕಿ 16 ಎಕ್ರೆ ಜಾಗ ಆಯ್ಕೆ ಮಾಡಿಕೊಂಡು ಇಲ್ಲಿಯೇ ವೃಕ್ಷವಾಟಿಕಾ ರೂಪಿಸತೊಡಗಿದರು.

ಪಶ್ಚಿಮಘಟ್ಟದ ಎಲ್ಲಾ ವೈವಿಧ್ಯಮಯ ಔಷಧೀಯ ಸಸ್ಯಗಳು, ಮೂಲಿಕೆಗಳು, ಮರಗಳನ್ನು ಸಂಗ್ರಹಿಸಿ ಬೆಳೆಸಿ ಸಂರಕ್ಷಿಸುವದುವೃಕ್ಷ ವಟಿಕಾದ ಮುಖ್ಯ ಉದ್ದೇಶ. ಅಪರೂಪದ, ಅಳಿವಿನಂಚಿನಲ್ಲಿರುವ, ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ, ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕೇಂದ್ರವನ್ನು ರೂಪಿಸಲಾಗುತ್ತಿದೆ.

ಭಾಗಮಂಡಲದಲ್ಲಿನ ಈ ವನದಲ್ಲಿ 500 ವೈವಿಧ್ಯತೆಯ 5 ಸಾವಿರಕ್ಕೂ ಹೆಚ್ಚಿನ ಸಸ್ಯಗಳನ್ನು ಬೆಳೆಸಲಾಗಿದೆ. ಮೂಲಿಕಾ ವನ ರೂಪಿಸುವ ಸಂದರ್ಭ ಈ ಭೂಮಿಯಲ್ಲಿದ್ದ ಮರ, ಸಸ್ಯಗಳನ್ನು ಕೂಡ ಹಾಗೇ ಉಳಿಸಿ ಕೊಳ್ಳಲಾಗಿದೆ.ಇಲ್ಲಿದ್ದ 260 ಮರಗಳಿಗೆ ಮತ್ತಷ್ಟು ಸಂರಕ್ಷಣೆ ನೀಡಲಾಗಿದೆ. ಜೀವವೈವಿಧ್ಯತೆ ಸಂರಕ್ಷಣೆಗೆ ಎಲ್ಲಾ ಪ್ರಯತ್ನ ಮಾಡಲಾಗಿದೆ. ಮುಂದಿನ ಹಂತದಲ್ಲಿ 720 ಔಷಧೀಯ ಸಸ್ಯಗಳನ್ನು ಇದೇ ವನದಲ್ಲಿ ಬೆಳೆಸುವ ಉದ್ದೇಶವಿದೆ ಎಂದು ಸಂಯಮೀಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಅಂತೆಯೇ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಸಂಶೋಧನೆ ಮಾಡುವವರಿಗೂ ಇದೊಂದು ಮಾಹಿತಿ ಕೇಂದ್ರವಾಗಲಿದೆ.

ವೈದಿಕ ವನದಲ್ಲಿ,ನವಗ್ರಹ ವನ, ಪಂಚವಟಿ ವನ, ನಕ್ಷತ್ರ ವನ, ನಂದನವನ, ರಾಶಿ ವನ, ಸಪ್ತಋಷಿವನ, ಸಂತಾನ ವನ, ಶಿವಪಂಚಾಯತನ ವನ, ಶ್ರೀವರಲಕ್ಷ್ಮಿವೃತವನ, ಶ್ರೀ ಸತ್ಯನಾರಾಯಣ ವೃತವನ, ಶ್ರೀ ನರಸಿಂಹ ಜಯಂತಿ ವೃತ ವನಗಳನ್ನು ರೂಪಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿಯೇ ಅಪರೂಪದ ಔಷಧೀಯ ಸಸ್ಯ ವನ ಕಾವೇರಿ ತೀರದಲ್ಲಿ ರೂಪುಗೊಂಡಿದೆ.

ಪಶ್ಟಿಮಘಟ್ಟ ಶ್ರೇಣಿಯ ಬ್ರಹ್ಮಗಿರಿ ತಪ್ಪಲಿನಲ್ಲಿರುವ ಬೆಟ್ಟ ಪ್ರದೇಶದಲ್ಲಿ ವನ ರೂಪುಗೊಂಡಿದ್ದು, ಶತಮಾನಗಳ ಹಿಂದೆ ಅಗಸ್ಯಋಷಿಗಳು ಇಲ್ಲಿ ತಪಸ್ಸು ಮಾಡಿದ್ದ ಕಾರಣದಿಂದಾಗಿಯೂ ಈ ಪ್ರದೇಶದ ಬಹಳ ಪವಿತ್ರವೆನಿಸಿದೆ. ಶ್ರೀಮದ್ ಭುವನೇಂದ್ರ ತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಡಾ.ಪಿ. ದಯಾನಂದ ಪೈ, ಗೌರವಾಧ್ಯಕ್ಷ ಡಾ.ಜಗನ್ನಾಥ್ ಶೆಣೈ ಅವರುಗಳು ಸ್ವಾಮೀಜಿಯೊಂದಿಗೆ ಈ ಅಪೂರ್ವ ಸಸ್ಯ ವನ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.