ಮಡಿಕೇರಿ, ಸೆ. 30: ಜೀವ ನದಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಗೆ ಹೊದಿಸಿರುವ ಮೇಲ್ಛಾವಣಿಯನ್ನು ಕೂಡಲೇ ತೆರವುಗೊಳಿಸುವಂತೆ, ಬ್ರಹ್ಮಗಿರಿ ಬೆಟ್ಟಕ್ಕೆ ಹತ್ತುವ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವದನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸುವಂತೆ ಇಂದು ಬಾಳುಗೋಡುವಿನಲ್ಲಿ ನಡೆದ ಫೆಡರೇಶನ್ ಆಫ್ ಕೊಡವ ಸಮಾಜದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ವಹಿಸಿದ್ದು, ಈ ಎರಡು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆದು ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತಲ್ಲದೆ, ಈ ವರ್ಷ ನವೆಂಬರ್ 10 ರಂದು ಸರ್ಕಾರದ ವತಿಯಿಂದ ಮಡಿಕೇರಿಯಲ್ಲಿ ನಡೆಸಲುದ್ದೇಶಿಸಿದ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಲಾಯಿತು. ಎಲ್ಲಾ ಕೊಡವ ಸಮಾಜದಿಂದ ಜಿಲ್ಲಾಧಿಕಾರಿ ಮತ್ತು ರಾಜ್ಯದ ಮುಖ್ಯಮಂತ್ರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿ ಯಾವದೇ ಕಾರಣಕ್ಕೂ ಟಿಪ್ಪು ಜಯಂತಿಯನ್ನು ನಡೆಸದಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು.

ವರ್ಷಂಪ್ರತಿ ನಡೆಸುವಂತೆ ಈ ವರ್ಷವು “ಕೊಡವ ನಮ್ಮೆ”ಯನ್ನು ನವೆಂಬರ್ 4, 5, 6 ರಂದು ಬಾಳುಗೋಡುವಿನಲ್ಲಿರುವ ಸಮಾಜದಲ್ಲಿ ನಡೆಸುವಂತೆಯೂ ಸಾಂಸ್ಕøತಿಕ, ಆಟೋಟ ಹಾಗೂ ವಿವಿಧ ಚಟುವಟಿಕೆಗಳನ್ನು ನಡೆಸುವಂತೆಯೂ, ಇದಕ್ಕಾಗಿ ರಚಿಸಿದ ಸಮಿತಿಯವರು ಪೂರ್ಣ ಜವಾಬ್ದಾರಿಕೆಯನ್ನು ತೆಗೆದುಕೊಂಡು ನಡೆಸುವಂತೆಯೂ ತೀರ್ಮಾನಿಸ ಲಾಯಿತು.

ಕೊಡವ ನಮ್ಮೆಯ ಸಂಬಂಧ ತಾ. 5 ರಂದು ವೀರ ಯೋಧರ ಸ್ಮಾರಕದ ಉದ್ಘಾಟನೆಯನ್ನು ಲೆ. ಜನರಲ್ ಕೋದಂಡ ಸೋಮಣ್ಣ ಅವರು ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿ ಸುವಂತೆ ಹಾಗೂ ಸಮಾರೋಪ ಸಮಾರಂಭಕ್ಕೆ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ರಾಜ್ಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆ ಉಮಾಶ್ರೀ ಅವರನ್ನು ಆಹ್ವಾನಿಸುವಂತೆಯೂ ತೀರ್ಮಾನಿಸ ಲಾಯಿತು.

ಕೊಡವ ನಮ್ಮೆಯ ಕಾರ್ಯಕ್ರಮಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವ ಮತ್ತು ಧನ ಸಹಾಯವನ್ನು ಪಡೆದು ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಲಾಯಿತು.

ಕಾವೇರಿ ಸಂಕ್ರಮಣ ಜಾತ್ರೆ ಸಂಬಂಧ ನಡೆಸುವ ಪೂರ್ವಭಾವಿ ಸಭೆಗೆ ಕಾವೇರಿ ಮಾತೆಯನ್ನು ಕುಲದೇವತೆಯಾಗಿ ಆರಾಧಿಸುವ ಕೊಡವರನ್ನು ಆಹ್ವಾನಿಸದೆ ಇತರರನ್ನು ಆಹ್ವಾನಿಸಿಕೊಂಡು ಅಸಂಬದ್ಧ ತೀರ್ಮಾನ ಕೈಗೊಂಡು ನಿಜವಾದ ಆಚರಣೆ ಹಾಗೂ ಕಟ್ಟುಪಾಡುಗಳನ್ನು ಕಡೆಗಣಿಸುತ್ತಿರುವದನ್ನು ಸಭೆಯಲ್ಲಿ ಪ್ರಸ್ತಾಪಿಸಿ ಸಮಾಜದ ಮುಖಾಂತರ ಮುಂದಕ್ಕೆ ಇಂತಹ ತೀರ್ಮಾನಗಳಿಗೆ ಆಸ್ಪದ ನೀಡದಂತೆ ತೀರ್ಮಾನಿಸ ಲಾಯಿತು.

ಕೊಡವ ಸಮಾಜದವರು ವಿವಾಹ ಮುಹೂರ್ತದ ದಿನದಂದು ನಡೆಸುವ (ಗಂಗಾಪೂಜೆ) ನೀರು ತೆಗೆದು ಕುಣಿಯುವ ವಿಚಾರದಲ್ಲಿ ಚರ್ಚೆ ನಡೆದು ಆಯಾಯ ಕೊಡವ ಸಮಾಜದವರು ಮತ್ತು ಮದುವೆ ಕಾರ್ಯ ನಡೆಸುವ ಮನೆಯವರು ಸೇರಿ ಒಮ್ಮತದಿಂದ 2 ಗಂಟೆ ಸಮಯಾವಕಾಶವನ್ನು ನಿಗದಿ ಪಡಿಸುವ ತೀರ್ಮಾನವನ್ನು ಕೈಗೊಳ್ಳಲಾಯಿತು.

ಸಭೆಯಲ್ಲಿ ಎಲ್ಲಾ ಕೊಡವ ಸಮಾಜದ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು. ಸಮಾಜದ ಪೋಷಕ ಸದಸ್ಯ ಮಾಜಿ ಸಚಿವ ಎಂ. ಸಿ. ನಾಣಯ್ಯ ಅವರು ಪಾಲ್ಗೊಂಡು ಉತ್ತಮ ಸಲಹೆ ನೀಡಿದರು.

ವೇದಿಕೆಯಲ್ಲಿ ಮಹಿಳಾ ಅಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ಉಪಾಧ್ಯಕ್ಷ ಮಂಡೇಪಂಡ ರವಿ ಉತ್ತಪ್ಪ, ಕೊಂಗಂಡ ಎಸ್. ದೇವಯ್ಯ, ಮಾಳೇಟಿರ ಅಭಿಮನ್ಯು ಕುಮಾರ್, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಜಂಟಿ ಕಾರ್ಯದರ್ಶಿ ಚಕ್ಕೇರ ವಾಸು ಕುಟ್ಟಪ್ಪ ಇನ್ನಿತರರು ಪಾಲ್ಗೊಂಡಿದ್ದರು. ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ವಂದಿಸಿದರು.