ಸೋಮವಾರಪೇಟೆ, ಜ. 21: ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ ಹಾಗೂ ತೋಳೂರುಶೆಟ್ಟಳ್ಳಿಯ ಕಾವೇರಿ ಮಾತಾ ಯುವತಿ ಮಂಡಳಿ ಆಶ್ರಯದಲ್ಲಿ ಇಲ್ಲಿನ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ನೆರೆಹೊರೆ ಯುವಜನ ಸಂಸತ್ತು ಹಾಗೂ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ನಡೆಯಿತು.

ಮಾಹಿತಿ ಕಾರ್ಯಾಗಾರವನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಯಡೂರು ರವಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಬಾಲಕೃಷ್ಣ ವಹಿಸಿ, ಶಿಕ್ಷಣ ಜಾಗೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಅವರು ನೆರೆಹೊರೆ ಯುವಜನ ಸಂಸತ್ ವಿಷಯದ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಜಲಜ ಶೇಖರ್ ಅವರು ಸ್ವಚ್ಛ ಭಾರತ್ ವಿಷಯದ ಬಗ್ಗೆ ಮಾತನಾಡಿದರೆ, ಭಗತ್ ಸಿಂಗ್ ಸೇನೆಯ ಜಿಲ್ಲಾ ಕಾರ್ಯದರ್ಶಿ ದಯಾನಂದ್ ಅವರು ಭ್ರಷ್ಟಾಚಾರ ಮುಕ್ತ ಡಿಜಿಟಲ್ ಇಂಡಿಯಾ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕಾವೇರಿ ಮಾತಾ ಯುವತಿ ಮಂಡಳಿಯ ಅಧ್ಯಕ್ಷೆ ವೀಣಾ ಮಂಜಪ್ಪ, ಯುವ ಒಕ್ಕೂಟದ ಪದಾಧಿಕಾರಿಗಳಾದ ಎಂ.ಡಿ. ಹರೀಶ್, ಕೆ.ಪಿ. ಭಾನುಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.