ವೀರಾಜಪೇಟೆ, ನ. 26: ಮಾಜಿ ಸೈನಿಕರಿಗೆ ಸರಕಾರಿ ಜಾಗ ನೀಡದೆ ವಲಸಿಗರಿಗೆ ಎಕರೆಗಟ್ಟಲೇ ಜಾಗ ನೀಡುವ ತಾಲೂಕು ಆಡಳಿತದ ಕಾರ್ಯವೈಖರಿ ಖಂಡಿಸಿ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ನೇತೃತ್ವದಲ್ಲಿ ಮಾಜಿ ಸೈನಿಕರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಮಾಜಿ ಸೈನಿಕ ಚೇಂದ್ರಿಮಾಡ ಗಣೇಶ್ ನಂಜಪ್ಪ, ಸರಕಾರಿ ಜಾಗದಲ್ಲಿ ಒಂದಿಷ್ಟು ಜಾಗ ನೀಡಿ ಎಂದು ಅರ್ಜಿ ಹಾಕಿದರೆ, ಜಾಗ ನೀಡದೆ ತಾಲೂಕು ಆಡಳಿತ ನಿರ್ಲಕ್ಷ್ಯ ಧೋರಣೆ ತಾಳಿದೆ. ವಲಸಿಗರಿಗೆ ಎಕರೆಗಟ್ಟಲೇ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿ ಕೊಡಲಾಗಿದೆ. ಅದಕ್ಕೆ ಪುರಾವೆಗಳು ನಮ್ಮಲ್ಲಿವೆ. ದೇಶಕ್ಕಾಗಿ ದುಡಿದ ನಾವು ನಿವೃತ್ತಿ ಬಳಿಕ ನೆಲೆಗಾಗಿ ಸರಕಾರಿ ಜಾಗ ಕೋರಿದರೆ ಅದನ್ನು ನೀಡಲು ತಾಲೂಕು ಆಡಳಿತ ಇಬ್ಬಂದಿ ನೀತಿ ಅನುಸರಿಸುವದು ಖಂಡನಿಯ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ನೂರಾರು ಎಕರೆ ಸರಕಾರಿ ಜಾಗ ವಲಸಿಗರ ಹೆಸರಿನಲ್ಲಿ ಅಲ್ಲದೆ ಬೇನಾಮಿ ಹೆಸರಿನಲ್ಲಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಲೋಕಾಯುಕ್ತಾ 1/4/14 ರಲ್ಲಿ ತೀರ್ಪು ನೀಡಿದ್ದು, ಜಿಲ್ಲಾಡಳಿತಕ್ಕೆ ಮೂರು ತಿಂಗಳಲ್ಲಿ 123/ 1 ರ 20 ಎಕರೆ ಜಾಗ ತೆರವಿಗೆ ಆದೇಶ ನೀಡಿದ್ದರೂ ಇಂದಿಗೂ ಆದೇಶ ಪಾಲನೆಯಾಗಿಲ್ಲ. ತಾಲೂಕು ಆಡಳಿತಕ್ಕೆ ಈ ಜಾಗವನ್ನು ತಮಗೆ ನೀಡಲು ಕೋರಿದಾಗ, ನ್ಯಾಯಾಲಯ ದಲ್ಲಿ ಪ್ರಕರಣ ಇದೆ ಎಂದು ಕಂದಾಯಧಿಕಾರಿ ಹೇಳಿಕೆ ನೀಡಿ, ನಂತರ ತೆÀರವುಗೊಂಡ ಪೈಸಾರಿ 123/1ಪಿ1 ರಲ್ಲಿನ 17.50 ಎಕರೆ ಜಾಗಕ್ಕೆ ಮಂಜೂರಾತಿ ಕೋರಿದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಇದಕ್ಕೆ ಸ್ವಂದಿಸಿಲ್ಲ.

ಮಾಹಿತಿ ಹಕ್ಕಿನಲ್ಲಿ ಪಡೆದ ಮಾಹಿತಿಯಂತೆ 528/6 ಹಾಗೂ 528/18ರಲ್ಲಿ ವ್ಯಕ್ತಿಯೊಬ್ಬರು ತಲಾ 10 ಎಕರೆಯಂತೆ 20 ಎಕರೆ ಸರಕಾರಿ ಭೂಮಿ ಹೊಂದಿದ್ದಾರೆ. ಅದೇ ರೀತಿ ಮೂಲತಃ ತಮಿಳುನಾಡಿನ ವ್ಯಕ್ತಿಯೊಬ್ಬರು 13 ಎಕರೆ ಹಾಗೂ ಇನ್ನಿತರರು ಸಾಕಷ್ಟು ಜಾಗ ಒತ್ತುವರಿ ಮಾಡಿದ್ದಾರೆ. ಈ ಕರ್ಮಕಾಂಡದ ಹಿಂದೆ ತಾಲೂಕು ಆಡಳಿತ ಶಾಮೀಲಾಗಿದೆ. ಇಲ್ಲಿನ ಕಂದಾಯ ಇಲಾಖೆ ಸರಕಾರಿ ಭೂಮಿಯನ್ನು ವಲಸಿಗರಿಗೆ ಮಾರಾಟ ಮಾಡುವ ಸುಳ್ಳು ದಾಖಲೆ ಸೃಷ್ಟಿ ಮಾಡುವದರಲ್ಲಿ ನಿರಂತರವಾಗಿದೆ ಎಂದು ಆರೋಪಿಸಿ, ಇನ್ನಾದರೂ ಅಕ್ರಮ ಒತ್ತುವರಿ ಭೂಮಿ ತೆರವು ಮಾಡಿ ಮಾಜಿ ಸೈನಿಕರಿಗೆ ನ್ಯಾಯ ಒದಗಿಸಲಿ ಎಂದು ಹೆಚ್.ಕೆ. ಗಣೇಶ್ ಆಗ್ರಹಿಸಿದರು.

ಜಿಲ್ಲಾ ಹಾಗೂ ತಾಲೂಕು ಆಡಳಿತ ಜಾಗ ನೀಡುವ ಭರವಸೆ ನೀಡುವವರೆಗೆ ಶಾಂತಿಯುತವಾಗಿ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸುವದಾಗಿ ತೀರ್ಮಾನಿಸಿ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ, ಮಾಜಿ ಸೈನಿಕ ಎ.ಜೆ. ಪೂಣಚ್ಚ, ಆರ್ಜಿ ಗ್ರಾಮದ ಎ.ಎನ್. ಗೋಪಾಲ್, ಹ್ಯಾರಿ ಅಚ್ಚಯ್ಯ ಮತ್ತು ಹೆಗ್ಗಳ ಗ್ರಾಮದ ಪ್ಯಾಟ್ರಿಕ್ ಗೊನ್ಸಾಲ್ವೆಸ್, ಹೆಚ್.ಕೆ. ಅಪ್ಪಯ್ಯ, ಸೇರಿದಂತೆ ಮತ್ತಿತ್ತರ ಮಾಜಿ ಸೈನಿಕರುಗಳು ಪಾಲ್ಗೊಂಡಿದ್ದರು.