ಸೋಮವಾರಪೇಟೆ, ಜು. 30: ಎಲ್ಲಾ ಹೊಸ ಮುಖಗಳನ್ನೇ ಹೊಂದಿರುವ ಪ್ರಸಕ್ತ ಸಾಲಿನ ತಾಲೂಕು ಪಂಚಾಯಿತಿ ಆಡಳಿತ ಮಂಡಳಿ ತಾನು ನಡೆಸುವ ಸಾಮಾನ್ಯ ಸಭೆಗಳಲ್ಲಿ ಯಾವದೇ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲತೆಯನ್ನು ಕಾಣುತ್ತಿದೆ. ಯಾವದೇ ಒಂದು ವಿಚಾರ ಪ್ರಸ್ತಾಪವಾದರೂ ಸಹ ಸದಸ್ಯರಲ್ಲಿನ ಒಗ್ಗಟ್ಟಿನ ಕೊರತೆ, ವಿಚಾರವನ್ನು ಮುಟ್ಟಿಸುವ ಮಾರ್ಗ, ವೇಗ, ಸಮಯ ಪ್ರಜ್ಞೆಯಲ್ಲಿ ಎಡವತ್ತಿರುವಂತೆ ಕಂಡುಬರುತ್ತಿದೆ.
ಕೆಲವೊಂದು ಗಂಭೀರ ವಿಚಾರಗಳು ಸಭೆಯಲ್ಲಿ ಪ್ರಸ್ತಾಪವಾದರೂ ಸಹ ಅವುಗಳು ತಾರ್ಕಿಕ ಅಂತ್ಯ ಕಾಣಲೇ ಇಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಿನ್ನೆ ನಡೆದ ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಕಂಡುಬಂತು.
ತಾಲೂಕಿನ ಚೆಟ್ಟಳ್ಳಿ, ವಾಲ್ನೂರು ತ್ಯಾಗತ್ತೂರು ಭಾಗದಲ್ಲಿ ಮಿತಿಮೀರಿದ ಕಾಡಾನೆ ಹಾವಳಿಯಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದು, ಈಗಾಗಲೇ ಪ್ರಾಣ ಹಾನಿಯೂ ಸಂಭವಿಸಿದೆ. ಈ ಬಗ್ಗೆ ಎಸಿಎಫ್ ಸಭೆಗೆ ಆಗಮಿಸಿ ಉತ್ತರ ನೀಡಬೇಕಿತ್ತು. ಆದರೆ ಬಂದಿಲ್ಲ. ಅವರಿಲ್ಲದಿದ್ದ ಮೇಲೆ ಕಾಡಾನೆ ಸಮಸ್ಯೆ ಬಗ್ಗೆ ಚರ್ಚಿಸುವದಾದರೂ ಹೇಗೆ? ಎಸಿಎಫ್ ಅವರನ್ನು ಕರೆಸಿ ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದರು.
ಸಭೆಗೆ ಆಗಮಿಸಿದ್ದ ಆರ್‍ಎಫ್‍ಓ ಮೊಹಿಸೀನ್ ಬಾಷ, ಎಸಿಎಫ್ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಉತ್ತರಿಸಿದರು. ಇದರಿಂದ ಕೆಂಡಾಮಂಡಲರಾದ ಮಣಿ, ಆನೆಗಳು ಜನರನ್ನು ತುಳಿದು ಸಾಯಿಸುತ್ತಿದೆ. ಈ ಬಗ್ಗೆ ಚರ್ಚಿಸಿ ಆನೆಗಳನ್ನು ಸ್ಥಳಾಂತರ ಮಾಡಲು ಎಸಿಎಫ್ ಅವರ ಗಮನಕ್ಕೆ ತರೋಣ ಎಂದರೆ ಅವರೇ ಸಭೆಗೆ ಆಗಮಿಸುತ್ತಿಲ್ಲ. ಸಮಸ್ಯೆಯ ಗಂಭೀರತೆಯೇ ಅರ್ಥವಾಗುತ್ತಿಲ್ಲ. ಮಂತ್ರಿಗಳು ಬಂದರೆ ಪ್ರತ್ಯಕ್ಷರಾಗುವವರಿಗೆ ಇಂತಹ ಸಭೆಗಳಿಗೆ ಬಂದು ಉತ್ತರ ನೀಡೋಕಾಗೋದಿಲ್ವಾ? ಎಂದು ಜೋರು ದನಿಯಲ್ಲಿ ಪ್ರಶ್ನಿಸಿದರು.
ಈ ಸಂದರ್ಭ ಅರಣ್ಯ ಇಲಾಖೆಯ ಪರ ನಿಂತ ಸದಸ್ಯ ಸತೀಶ್, ಎಸಿಎಫ್ ಬಂದಿಲ್ಲದ ಮೇಲೆ ಸುಮ್ಮನೆ ಯಾಕೆ ಚರ್ಚೆ ಎಂದು ಮಧ್ಯೆ ಪ್ರವೇಶಿಸಿದರು. ಎಸಿಎಫ್ ಬರಲೇ ಬೇಕು. ಅವರನ್ನು ಕರೆಸಿ ಎಂದು ಮಣಿ ಆಗ್ರಹಿಸಿದರು. ನಿಮಗೆ ಎಸಿಎಫ್ ಬೇಕು-ನಮಗೆ ಆರ್‍ಎಫ್‍ಓ ಸಾಕು ಎಂದು ಸತೀಶ್ ಹೇಳಿದ ಸಂದರ್ಭ, ಆನೆಗಳು ಮನೆಯ ಹತ್ತಿರವೇ ಬರುತ್ತಿವೆ. ನಿಮಗೆ ಸಮಸ್ಯೆ ಗೊತ್ತಾಗೋದಿಲ್ಲ, ನಾವೇನು ಮಾಡ್ಬೇಕು ಎಂದಾಗ, ಗುಂಡು ಹೊಡೆಯಿರಿ ಎಂದು ಮೆಲ್ಲನೆಯ ಸ್ವರದಲ್ಲಿ ಹೇಳಿದರು. ಈ ಬಗ್ಗೆ ಅರ್ಥಹೀನ ಹಾಸ್ಯದ ಹೊನಲು ಹರಿಯಿತೇ ಹೊರತು ಕಾಡಾನೆಗಳ ಸಮಸ್ಯೆಯ ಬಗ್ಗೆ ಸ್ಪಷ್ಟವಾದ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲವಾಯಿತು.
ಕಾಡಾನೆಗಳ ಸಮಸ್ಯೆಯ ಭೀಕರತೆಯ ಚಿತ್ರಣವನ್ನು ಸಭೆಯ ಮಧ್ಯದಲ್ಲಿಯೂ ಮಣಿ ಉತ್ತಪ್ಪ ಅವರು ಪ್ರಸ್ತಾಪಿಸುತ್ತಿದ್ದಾಗ ಕೆಲವು ಸದಸ್ಯರು ನಕ್ಕರು. ತಮ್ಮೊಳಗೇ ಚರ್ಚೆ ಮಾಡಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಮಣಿ, ಕಾಡಾನೆ ಧಾಳಿ ಬಗ್ಗೆ ಮಾತಾಡಿದ್ರೆ ನೀವೆಲ್ಲಾ ನಗ್ತೀರಾ, ನಗೋವ್ರು ನಗ್ತಾ ಇರ್ಲಿ. ಆನೆಯಿಂದ ಮನುಷ್ಯ ಸತ್ತ ಮೇಲೆ ದುಡ್ಡು ಕೊಟ್ರೆ ಏನ್ ಪ್ರಯೋಜನ? ಕಾಡಾನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಈ ನಡುವೆ ಕೆಲ ಸದಸ್ಯರು ಟೈಂ ಆಯ್ತು,,ಊಟ ಮಾಡೋಣ ಎಂದರು. ಇದರಿಂದ ಮತ್ತಷ್ಟು ಕೆರಳಿದ ಮಣಿ ಉತ್ತಪ್ಪ, ಊಟ ಮಾಡಿದ್ರೆ ಸಾಕಾ, ಜನತೆಯ ಸಂಕಷ್ಟ ಪರಿಹಾರ ಮಾಡೋದು ಬೇಡ್ವಾ? ಎಂದು ಖಾರವಾಗಿ ಪ್ರಶ್ನಿಸಿದರು.
ಕೊನೆಗೂ ಕಾಡಾನೆ ಧಾಳಿ ನಿಯಂತ್ರಣ, ಸ್ಥಳಾಂತರ ಬಗ್ಗೆ ಸಭೆಯಲ್ಲಿ ಒಮ್ಮತದ ತೀರ್ಮಾನ, ನಿರ್ಣಯ ಆಗಲೇ ಇಲ್ಲ. ಎರಡು ದಿನದಲ್ಲಿ ಎಸಿಎಫ್ ನಮ್ಮ ಭಾಗಕ್ಕೆ ಬರಬೇಕು? ಈ ಜವಾಬ್ದಾರಿಯನ್ನು ಅಧ್ಯಕ್ಷರು ಹೊರಬೇಕು ಎಂದು ಆಗ್ರಹಿಸಿದರೂ ಇದಕ್ಕೆ ಅಧ್ಯಕ್ಷೆ ಸುತಾರಾಂ ಒಪ್ಪಲಿಲ್ಲ. ಅವರು ಬರ್ತಾರೆ ಬಿಡಿ ಎಂದಷ್ಟೇ ಹೇಳಿದರು.
ಒಟ್ಟಾರೆ ಯಾವದೇ ಗಂಭೀರ ಸಮಸ್ಯೆಯ ಬಗ್ಗೆ ಓರ್ವ ಸದಸ್ಯ ಪ್ರಸ್ತಾಪಿಸಿದ ತಕ್ಷಣ ಕೆಲವು ಸದಸ್ಯರು ಮಧ್ಯೆ ಪ್ರವೇಶಿಸಿ ಸಮಸ್ಯೆಯ ಗಂಭೀರತೆಯನ್ನು ಕಡಿಮೆಗೊಳಿಸುವ, ಅಧಿಕಾರಿಗಳು ಉತ್ತರದಿಂದ ನುಣುಚಿಕೊಳ್ಳುವಂತೆ ಮಾಡುವ ಸನ್ನಿವೇಶ ಸೃಷ್ಟಿಯಾದಂತೆ ಕಂಡುಬಂತು.
ಇದರೊಂದಿಗೆ ಯಾವದೇ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಲು ನಿಂತರೂ ಸಹ ಮಣಿ ಉತ್ತಪ್ಪ ಅವರು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ಸಮಸ್ಯೆ ತಿಳಿಸುವ ಭರದಲ್ಲಿ ಪೀಠಿಕೆಗಳೇ ಅಧಿಕವಾಗುತ್ತಿದ್ದವು. ಇದು ಉಳಿದ ಸದಸ್ಯರಿಗೆ ಸರಿಕಾಣುತ್ತಿರಲಿಲ್ಲ. ಇದರಿಂದಾಗಿ ಸದಸ್ಯರುಗಳ ನಡುವೆ ಚರ್ಚೆ ನಡೆಯುತ್ತಿತ್ತೇ ಹೊರತು ಅಧಿಕಾರಿಗಳು ಇಲಾಖಾ ವರದಿ ಓದಿ ತಮ್ಮ ಆಸನಗಳತ್ತ ತೆರಳುತ್ತಿದ್ದರು.
ಅಧ್ಯಕ್ಷರು ಸಭೆಯನ್ನು ಇನ್ನಷ್ಟು ಹಿಡಿತಕ್ಕೆ ತೆಗೆದುಕೊಂಡರೆ ಸಮಸ್ಯೆಗಳ ಬಗ್ಗೆ ಆರೋಗ್ಯಪೂರ್ಣ ಚರ್ಚೆ ನಡೆದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸಾಮಾನ್ಯ ಸಭೆ ವೇದಿಕೆಯಾಗುತ್ತದೆ. ತಪ್ಪಿದರೆ ಸದಸ್ಯರುಗಳ ನಡುವೆಯೇ ಮಾತುಕತೆ ನಡೆಯುತ್ತದೆಯೇ ಹೊರತು ಅಧಿಕಾರಿ ವರ್ಗದಿಂದ ಪರಿಣಾಮಕಾರಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುವದಿಲ್ಲ.
- ವಿಜಯ್ ಹಾನಗಲ್