ಸೋಮವಾರಪೇಟೆ, ಜ. 23: ತಾಲೂಕು ಪಂಚಾಯಿತಿ ಅಧ್ಯಕ್ಷರ ಅಧಿಕಾರವನ್ನು ತಾ.ಪಂ.ನ ಉಪಾಧ್ಯಕ್ಷರು ಹೈಜಾಕ್ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.ಪತ್ರಿಕಾ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಚ್.ಆರ್.ಸುರೇಶ್, ಮೀಸಲಾತಿ ಯಲ್ಲಿ ಜೆಡಿಎಸ್ ಪಕ್ಷದ ಪುಷ್ಪ ರಾಜೇಶ್ ಅಧ್ಯಕ್ಷರಾಗಿದ್ದು, ಅವರಿಗೆ ಸರ್ಕಾರದ ಸೌಲಭ್ಯಗಳು ಸಿಗದಂತೆ ಬಿಜೆಪಿಯ ಆಡಳಿತ ಮಂಡಳಿ ಷಡ್ಯಂತರ ರೂಪಿಸಿದೆ ಎಂದು ದೂರಿದರು.
ಅಧ್ಯಕ್ಷರಿಗೆ ಸೂಕ್ತವಾದ ಕಚೇರಿ ಸೌಲಭ್ಯ ಒದಗಿಸಿಲ್ಲ. ವಾಹನ ಸೌಲಭ್ಯ ನೀಡಿಲ್ಲ. ಸಭೆಯ ಅಜೆಂಡಾವನ್ನು ಬಿಜೆಪಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮಾಡುತ್ತಾರೆ. ಕಾರ್ಯ ನಿರ್ವಹಣಾಧಿಕಾರಿ ಬಿಜೆಪಿ ಏಜೆಂಟರಾಗಿದ್ದಾರೆ. ಮುಂದಿನ 20ದಿನಗಳ ಒಳಗೆ ಅಧ್ಯಕ್ಷರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು. ತಪ್ಪಿದಲ್ಲಿ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.
ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯರ ದುಂಡಾವರ್ತನೆ ಮಿತಿಮೀರಿದೆ. ಜ.19ರಂದು ನಡೆದ ಸಾಮಾನ್ಯ ಸಭೆಯಲ್ಲಿ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಸದಸ್ಯರೊಬ್ಬರನ್ನು ಸಭಾಂಗಣದಿಂದ ಹೊರದಬ್ಬಿರುವದು ಖಂಡನೀಯ. ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲದ ಬಿಜೆಪಿ ಯವರು ದಬ್ಬಾಳಿಕೆ ತೋಳ್ಬಲದ ರಾಜಕಾರಣ ಮುಂದುವರಿಸಿದರೆ ಇತರ ಪಕ್ಷಗಳು ತೋಳ್ಬಲದ ರಾಜಕಾರಣ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್‍ನ ಅನಂತ್ ಕುಮಾರ್ ಶನಿವಾರಸಂತೆ ಜನರ ಪ್ರತಿನಿಧಿ, ಅವಮಾನ ಕೇವಲ ಜನಪ್ರತಿನಿಧಿಗಲ್ಲ. ಶನಿವಾರಸಂತೆ ಜನರಿಗೆ ಆದ ಅವಮಾನ ಎಂದು ಶನಿವಾರಸಂತೆ ಜೆಡಿಎಸ್ ಮುಖಂಡ ಎನ್.ಕೆ. ಅಪ್ಪಸ್ವಾಮಿ ದೂರಿದರು. ತಾಪಂ ಸಭೆಯಲ್ಲಿ ಕೆಲ ಸದಸ್ಯರು ಅನಾಗರಿಕ ವರ್ತನೆ ಮಾಡಲು ಕಾರ್ಯನಿರ್ವ ಹಣಾಧಿಕಾರಿಗಳ ಆಡಳಿತ ವೈಪಲ್ಯವೇ ಕಾರಣ. ಸಭಾ ಗೌರವಕ್ಕೆ ಧಕ್ಕೆ ತಂದ ಸದಸ್ಯರ ಸದಸ್ಯತ್ವ ಅನರ್ಹಗೊಳಿಸ ಬೇಕು ಎಂದು ಯುವ ಜನತಾದಳದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಹೇಳಿದರು. ಗೋಷ್ಠಿಯಲ್ಲಿ ಪಕ್ಷ ಮುಖಂಡರು ಗಳಾದ ಡಿ.ಎಸ್.ಚಂಗಪ್ಪ, ಎಂ.ಎ.ಅದಿಲ್ ಪಾಷ ಇದ್ದರು.