ಮಡಿಕೇರಿ, ಜ. 31: ದಡಾರ ಮತ್ತು ರುಬೆಲ್ಲಾ ರೋಗವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಆ ದಿಸೆಯಲ್ಲಿ ತಾ. 7 ರಿಂದ 28 ರವರೆಗೆ 21 ದಿನಗಳ ಕಾಲ 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ನಿಯಂತ್ರಣ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಸಾರ್ವಜನಿಕರು, ಪೋಷಕರು ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ಮನವಿ ಮಾಡಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದಡಾರ ರುಬೆಲ್ಲಾ ಮುಕ್ತ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಅಭಿಯಾನ ಆಯೋಜಿಸಿದ್ದು, ಆ ನಿಟ್ಟಿನಲ್ಲಿ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ದಡಾರ ರುಬೆಲ್ಲಾ ನಿಯಂತ್ರಣ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ದಡಾರ ಮತ್ತು ರುಬೆಲ್ಲಾ ವೈರಾಣುವಿನಿಂದ ಬರುವ ಕಾಯಿಲೆಯಾಗಿದ್ದು, ಕೆಮ್ಮು ಮತ್ತು ಸೀನುವದರ ಮೂಲಕ ಇತರರಿಗೆ ಹರಡುತ್ತದೆ. ದಡಾರದಿಂದ ನ್ಯುಮೋನಿಯಾ, ಅತಿಸಾರ ಭೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗೆಯೇ ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರದ ಮುಖ್ಯ ಲಕ್ಷಣವಾಗಿದ್ದು, ಇದು ಬರದಂತೆ ಎಚ್ಚರಿಕೆ ವಹಿಸುವದು ಬಹಳ ಮುಖ್ಯವಾಗಿದೆ ಎಂದು ಡಾ. ಓ.ಆರ್. ಶ್ರೀರಂಗಪ್ಪ ತಿಳಿಸಿದರು.
ಆರ್.ಸಿ.ಹೆಚ್. ಅಧಿಕಾರಿ ಡಾ. ನಿಲೇಶ್ ಮಾಹಿತಿ ನೀಡಿ, 2020ಕ್ಕೆ ದಡಾರ ನಿರ್ಮೂಲನೆ ಹಾಗೂ ರುಬೆಲ್ಲಾ ನಿಯಂತ್ರಣ ಮಾಡುವ ಗುರಿ ಹೊಂದಲಾಗಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕೋರಿದರು.
ರುಬೆಲ್ಲಾ ರೋಗ ಗರ್ಭಿಣಿ ಸ್ತ್ರೀಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಗ್ಲುಕೋಮ, ಕಣ್ಣಿನ ಪೊರೆ, ಕಿವುಡುತನ, ಮೆದುಳು ಜ್ವರ, ಮಾನಸಿಕ ಅಸ್ವಸ್ಥತೆ, ಬುದ್ದಿಮಾಂದ್ಯತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ವಿಶೇಷ ಗಮನ ಹರಿಸುವದು ಅಗತ್ಯವಾಗಿದೆ ಎಂದರು.
(ಮೊದಲ ಪುಟದಿಂದ) 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡುವದರ ಮೂಲಕ ಸಮುದಾಯದಲ್ಲಿ ದಡಾರ ಮತ್ತು ರುಬೆಲ್ಲಾ ವಿರುದ್ಧ ಪ್ರತಿ ರಕ್ಷಣೆ ಹೆಚ್ಚಿಸುವದು ದಡಾರ ರುಬೆಲ್ಲಾ ಲಸಿಕಾ ಅಭಿಯಾನದ ಉದ್ದೇಶವಾಗಿದ್ದು, ಎಲ್ಲಾ ಸರ್ಕಾರಿ ಅನುದಾನಿತ, ಖಾಸಗಿ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ, ಆರೋಗ್ಯ ಉಪ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಈ ಅಭಿಯಾನ ನಡೆಯಲಿದೆ ಎಂದು ಮನವಿ ಮಾಡಿದರು.
ದಡಾರ ರುಬೆಲ್ಲಾ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1.29 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಚುಚ್ಚುಮದ್ದು ಮಾದರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತದೆ ಎಂದು ನಿಲೇಶ್ ತಿಳಿಸಿದರು.
ಜಂತುಹುಳ ನಿವಾರಣಾ ದಿನ: ತಾ. 10 ರಂದು ರಾಷ್ಟ್ರೀಯ ಜಂತುಹುಳ ನಿವಾರಣಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆ ಪಡೆಯುವಂತಾಗಲು ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ಕೋರಿದ್ದಾರೆ.
1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ಜಂತುಹುಳ ನಿವಾರಣಾ ಮಾತ್ರೆಯನ್ನು ಉಚಿತವಾಗಿ ನೀಡಲಾಗುವದು. ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಸಹ ಜಂತುಹುಳ ಮಾತ್ರೆ ನೀಡಲಾಗುವದು. ಜಂತುಹುಳ ನಿವಾರಣಾ ಕಾರ್ಯಕ್ರಮಕ್ಕೆ ಕೈ ಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ ಮಾತನಾಡಿ, ತಾ. 2 ರಂದು ‘ರಾಷ್ಟ್ರೀಯ ಹೆಣ್ಣು ಮಕ್ಕಳ’ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 10 ಗಂಟೆಗೆ ನಗರದ ಬಾಲಭವನದಿಂದ ಜಾಥಾ ನಡೆಯಲಿದೆ. ನಂತರ 11 ಗಂಟೆಗೆ ಜಿಲ್ಲಾ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.