ಮಡಿಕೇರಿ, ಆ. 18: ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರೂ ಯುವ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಯುವ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ದಡಿಯಲ್ಲಿ ಸ್ವಚ್ಛತಾ ಆಂದೋಲನ ತಾ. 31 ರವರೆಗೆ ನಡೆಯಲಿದ್ದು ಇದರ ಅಂಗವಾಗಿ ಇತ್ತೀಚೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಗ್ಗೋಡ್ಲುವಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿದ್ದು, ಕ್ರೀಡೆ ನಡೆದ ಪರಿಸರ ರಸ್ತೆ ಹಾಗೂ ಸುತ್ತಮುತ್ತಲು ಅಶುಚಿತ್ವ ಉಂಟಾಗಿದ್ದು, ಈ ಸ್ಥಳವನ್ನು ಸ್ವಚ್ಛಗೊಳಿಸುವದರ ಮುಖಾಂತರ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿüಸಲಾಯಿತು. ಈ ಸಂದರ್ಭ ಸ್ವಚ್ಛತಾ ಪ್ರತಿಜ್ಞೆ ವಿಧಿಯನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ನೆರವೇರಿಸಿದರು. ಕ್ರೀಡೆ ನಡೆಯುವ ಪರಿಸರದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಅಳವಡಿಸಲಾಯಿತು.

ನೆಹರೂ ಯುವ ಕೇಂದ್ರದಡಿಯಲ್ಲಿ ಎಲ್ಲಾ ಯುವಕ, ಯುವತಿ ಮಂಡಳಿಗಳಲ್ಲಿ ತಾ. 31 ರ ತನಕ ವಿವಿಧ ಸ್ವಚ್ಛತೆ ಕಾರ್ಯಕ್ರಮಗಳು ನಡೆಯಲಿವೆ ಎಂದು ನೆಹರೂ ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ತಿಳಿಸಿದ್ದಾರೆ.