ಗೋಣಿಕೊಪ್ಪಲು, ಆ. 25: ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸಲು ತಾ. 30 ರಂದು ಜಿಲ್ಲಾಮಟ್ಟದ ಬೆಳೆಗಾರರ ಸಮಾವೇಶ ಏರ್ಪಡಿಸಲಾಗಿದೆ ಎಂದು ಕುತ್ತ್ನಾಡ್, ಬೇರಳಿನಾಡ್ ಬೆಳೆಗಾರರ ಸಂಘದ ಅಧ್ಯಕ್ಷ ತೀತಿಮಾಡ ಲಾಲಾ ಭೀಮಯ್ಯ ತಿಳಿಸಿದ್ದಾರೆ.
ಬಿಟ್ಟಂಗಾಲ ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಜಿಲ್ಲೆಯ ವಿವಿಧ ಭಾಗಗಳ ಬೆಳೆಗಾರರ ಸಂಘದ ಪ್ರತಿನಿಧಿಗಳು, ಕಾಫಿ ಮಂಡಳಿ ಸದಸ್ಯರುಗಳು ಹಾಗೂ ಸಂಘ-ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರದ ನೂತನ ಕಾಫಿ ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಪ್ರಮುಖವಾಗಿ ಚರ್ಚಿಸಿ ಬೆಳೆಗಾರ ಸಂಘಗಳ ಅಭಿಪ್ರಾಯ ಪಡೆದು, ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವದು ಎಂದರು.
ಕಾಫಿ ಬೆಳೆಗಾರರು ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸಿದಕ್ಕೆ ಸರ್ಕಾರದಿಂದ ಯಾವದೇ ಪರಿಹಾರ ಸಿಕ್ಕಿಲ್ಲ. ದರ ಕುಸಿತ, ಕಾರ್ಮಿಕರ ಸಮಸ್ಯೆ, ಹವಾಮಾನ ವೈಪರೀತ್ಯ, ರಸಗೊಬ್ಬರ ಬೆಲೆ ಏರಿಕೆ, ವ್ಯಾಪಾರಿಗಳಿಂದಾಗುತ್ತಿರುವ ಶೋಷಣೆ, ಮೋಡ ಬಿತ್ತನೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಚರ್ಚಿಸಲಾಗುವದು ಎಂದರು.
ಸಲಹೆಗಾರ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿ, ಸರ್ಕಾರ ಕಾಫಿ ಬೆಳೆಗಾರರನ್ನು ಕಡೆಗಣಿಸುತ್ತಾ ಬರುತ್ತಿದೆ. ಬರಪೀಡಿತ ತಾಲೂಕು ಘೋಷಣೆ ಮಾಡುವಲ್ಲಿಯೂ ಬೆಳೆಗಾರರನ್ನು ಕಡೆಗಣಿಸಿದೆ. ಕಾಫಿಗೆ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಂಡಿಲ್ಲ. ಕಾಫಿ ಮಂಡಳಿ ಅಧ್ಯಕ್ಷ ಸ್ಥಾನ ಕೂಡ ಬೆಳೆಗಾರನಿಗೆ ದೊರಕುತ್ತಿಲ್ಲ. ನಿರ್ದೇಶಕರ ಸಂಖ್ಯೆಗಳನ್ನು ಕೂಡ ಇಳಿಸುತ್ತಿದೆ. ಟಿಪಿ3 ನಿಯಮ ಪಾಲಿಸುವ ಮೂಲಕ ಮತ್ತೆ ಬೆಳೆಗಾರನಿಗೆ ಸಮಸ್ಯೆ ಎದುರಾಗಲಿದೆ. ಇಂತಹ ಸಮಸ್ಯೆಗಳ ಬಗ್ಗೆ ಚರ್ಚಿಸಿ ಕ್ರಮಕ್ಕೆ ಮುಂದಾಗುವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಸಲಹೆಗಾರ ನಾಮೇರ ರಾಮು ನಂಜಪ್ಪ, ಬಿ. ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಚೇಂದೀರ ಪ್ರಕಾಶ್ ಉಪಸ್ಥಿತರಿದ್ದರು.