ಮಡಿಕೇರಿ, ಆ. 23: ಬಹು ದಿನಗಳ ಬೇಡಿಕೆಯಾಗಿರುವ ಮಡಿಕೇರಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗೆ ತಾ. 27ರಂದು ಚಾಲನೆ ದೊರಕಲಿದೆ. ಅಲ್ಲದೆ, ನಗರದಾದ್ಯಂತ ಗುಂಡಿ ಬಿದ್ದಿರುವ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಮುಂದಿನ 10 ದಿನಗಳೊಳಗೆ ಪೂರ್ಣಗೊಳಿಸುವಂತೆ ತೀರ್ಮಾನ ಕೈಗೊಳ್ಳಲಾಗಿದೆ.ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಗೊಂಡಿತು. ಪ್ರತಿಕ್ರಿಯೆ ನೀಡಿದ ಪೌರಾಯುಕ್ತೆ ಪುಷ್ಪಾವತಿ ಅವರು, ಲೋಕೋಪಯೋಗಿ ಇಲಾಖೆ ವತಿಯಿಂದ ಯೋಜನೆ ಸಿದ್ದಪಡಿಸಲಾಗಿದೆ. ರೂ. 5 ಕೋಟಿ ಮೊತ್ತದ ಯೋಜನೆಗೆ ಈಗಾಗಲೇ ತಾಂತ್ರಿಕ ಅನುಮೋದನೆ ದೊರೆತಿದ್ದು, ಕಳೆದ ವಾರದಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ರೂ. 5 ಕೋಟಿಯಲ್ಲಿ ರೂ. 3.75 ಕೋಟಿ ಮಂಜೂರಾಗಿದ್ದು, ನಿನ್ನೆಯಷ್ಟೇ ರೂ. 1.99 ಕೋಟಿ ಬಿಡುಗಡೆಗೊಂಡಿದೆ. ತಾ. 27ರಂದು ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲಿದ್ದು, ಅಂದು ಭೂಮಿ ಪೂಜೆ ನೆರವೇರಿಸಲು ಕ್ರಮ ಕೈಗೊಂಡಿರುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ರಮೇಶ್ ಈ ಹಿಂದೊಮ್ಮೆ ಜುಲೇಕಾಬಿ ಅವರು ಅಧ್ಯಕ್ಷರಾಗಿದ್ದಾಗ ಭೂಮಿ ಪೂಜೆ ನೆರವೇರಿಸಲಾಗಿದೆ. ಮತ್ತೊಮ್ಮೆ ಭೂಮಿ ಪೂಜೆಯ ಅಗತ್ಯವಿಲ್ಲ. ಟೆಂಡರ್ ಕರೆದು ಕೆಲಸ ಪ್ರಾರಂಭಿಸಿ ಎಂದು ಸಲಹೆ ಮಾಡಿದರು. ಸದಸ್ಯ ಪ್ರಕಾಶ್ ಆಚಾರ್ಯ ಮಾತನಾಡಿ, ಈ ಹಿಂದೆ ಸುಮ್ಮನೆ ಭೂಮಿಪೂಜೆ ಮಾಡಲಾಗಿದೆ. ಇದೀಗ ಉಸ್ತುವಾರಿ ಸಚಿವರು ಹಣ ಬಿಡುಗಡೆ ಮಾಡಿಸಿ ಭೂಮಿ ಪೂಜೆ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಬೇಡ ಎಂದರು.
ಮಧ್ಯಪ್ರವೇಶಿಸಿದ ಸದಸ್ಯ ಪಿ.ಡಿ. ಪೊನ್ನಪ್ಪ, ಕೆ.ಎಂ. ಗಣೇಶ್ ಅವರುಗಳು ಭೂಮಿ ಪೂಜೆ ಎಂದು ಬೇಡ, ಕಾಮಗಾರಿ ಆರಂಭ ಎಂದು ಮಾಡಿದರಾಯಿತು ಎಂದು ಸಲಹೆ ನೀಡಿದರು. ಸದಸ್ಯರುಗಳಾದ ಉನ್ನಿಕೃಷ್ಣ, ರಮೇಶ್, ಅನಿತಾ ಪೂವಯ್ಯ, ಸವಿತಾ ರಾಖೇಶ್ ಅವರುಗಳು ಬಸ್ ನಿಲ್ದಾಣಕ್ಕೆ ಮಾರ್ಗದ ವ್ಯವಸ್ಥೆ ಬಗ್ಗೆ ಮಾಹಿತಿ ಬಯಸಿದರು. ಆಯುಕ್ತರು ಜಿ.ಟಿ. ವೃತ್ತದಿಂದ ರಾಜಾಸೀಟ್ ಮಾರ್ಗವಾಗಿ ಬಸ್ ನಿಲ್ದಾಣ ತಲಪುವಂತೆ ವ್ಯವಸ್ಥೆ ಮಾಡಲಾಗುವದೆಂದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಉನ್ನಿಕೃಷ್ಣ ಈಗಾಗಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ದಟ್ಟಣೆ ಎದುರಾಗಲಿದೆ. ಈಗಾಗಲೇ ಬಸ್‍ಗಳ ಸಂಖ್ಯೆ ಕಡಿಮೆಯಾಗಿದೆ. ಬಸ್ ನಿಲ್ದಾಣ ಕಾಮಗಾಗಿ ಪೂರ್ಣಗೊಳ್ಳುವಷ್ಟರಲ್ಲಿ ಬಸ್‍ಗಳೇ ಇರುವದಿಲ್ಲ. ಬಸ್‍ಗಳ ಮೇಲಿನ ತೆರಿಗೆ, ಸಾಲವನ್ನು ಪಾವತಿಸಲಾಗದೆ ಮಾಲೀಕರು ಬವಣೆ ಪಡುತ್ತಿದ್ದಾರೆ ಎಂದು ಹೇಳಿದರು. ಬಸ್‍ಗಳಿಗೆ ನಗರದೊಳಗೆ ಪ್ರವೇಶ ಕಲ್ಪಿಸದಂತೆ ತೀರ್ಮಾನ ಮಾಡಬೇಕಿತ್ತು ಎಂದರು.
ಈ ಸಂದರ್ಭ ನಿವುಗಳೇ ಬಸ್ ನಿಲ್ದಾಣ ಅಲ್ಲಿಯೇ ಬೇಕೆಂದು ಜಾಗ ಮಾಡಿಕೊಟ್ಟು ಇದೀಗ ಬೇಡವೆಂದು ಹೇಳುತ್ತಿದ್ದೀರಾ ಎಂದು ಎಸ್‍ಡಿಪಿಐ ಸದಸ್ಯ ಮನ್ಸೂರ್‍ಅಹ್ಮದ್, ಅಮೀನ್ ಮೊಹಿಸಿನ್ ತಿರುಗೇಟು ನೀಡಿದರು. ನಾವುಗಳು ನಿಲ್ದಾಣ ಬೇಡವೆಂದು ಹೇಳಲಿಲ್ಲ. ಕಾಮಗಾರಿ ಮುಗಿಯುವಷ್ಟರಲ್ಲಿ ಬಸ್‍ಗಳೇ ಇರುವದಿಲ್ಲ ಎಂದು ಹೇಳಿದ್ದಾಗಿ ಉನ್ನಿಕೃಷ್ಣ ಸಮಜಾಯಿಷಿಕೆ ನೀಡಿದರು. ಅಲ್ಲಿಗೆ ಚರ್ಚೆಗೆ ತೆರೆ ಬಿದ್ದಿತು.
ವೀಣಾಕ್ಷಿ ಹಾಗೂ ತಜಸ್ಸುಂ ಅವರುಗಳು ಅಧಿಕಾರಿ ಕಚೇರಿಯಲ್ಲೂ ಇರುವದಿಲ್ಲ, ಸಭೆಗೂ ಬರುವದಿಲ್ಲವೆಂದರು. ಇನ್ನುಳಿದ ಸದಸ್ಯರು ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಪ್ರಥಮ ದರ್ಜೆ ಗುಮಾಸ್ತ ಮನೋಜ್‍ಗೆ ದಸರಾ ಉತ್ಸವದ ಜವಾಬ್ದಾರಿ ಕೂಡ ಇರುವದರಿಂದ ಬದಲೀ ವ್ಯವಸ್ಥೆ ಮಾಡಬೇಕೆಂದು ಸದಸ್ಯೆ ತಜಸ್ಸುಂ ಗಮನ ಸೆಳೆದರು.