ಮಡಿಕೇರಿ, ಆ. 20: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸಿದೆ.

ತಾ. 26 ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ರಾಷ್ಟ್ರದ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ತತ್ವವೊಂದೇ ಪ್ರಮುಖ ಸಾಧನ.’ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

ಅಲ್ಲದೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ “ಸಹಕಾರ ಚಳುವಳಿಯಿಂದ ಮಾತ್ರವೇ ಗ್ರಾಮೀಣ ಅಭಿವೃದ್ಧಿ ಸಾಧ್ಯ.” ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಅದೇ ದಿನ ಮಧ್ಯಾಹ್ನ 12 ಗಂಟೆಯಿಂದ ಯೂನಿಯನ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಈ ಸಂಬಂಧ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಸುತ್ತೋಲೆಯನ್ನು ಕಳುಹಿಸಲಾಗಿದೆ. ಪ್ರಬಂಧ ಸ್ಪರ್ಧೆಗೆ ಒಂದು ಶಾಲೆಯಿಂದ ಒಬ್ಬ ವಿದ್ಯಾರ್ಥಿಯನ್ನು ಹಾಗೂ ಚರ್ಚಾ ಸ್ಪರ್ಧೆಗೆ ಒಂದು ಶಾಲೆಯಿಂದ ವಿಷಯದ ಪರವಾಗಿ ಒಬ್ಬರು ಮತ್ತು ವಿರುದ್ಧವಾಗಿ ಒಬ್ಬರನ್ನು ಆಯ್ಕೆ ಮಾಡಿ ಕಳುಹಿಸತಕ್ಕದ್ದು. ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರಯಾಣ ದರ ಪಾವತಿಸಲಾಗುವದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.