ಗೋಣಿಕೊಪ್ಪಲು, ಸೆ. 15: ಶ್ರೀ ನಾರಾಯಣ ಗುರು ಪರಿಪಾಲನಾ ಸಂಸ್ಥೆ ಪೊನ್ನಂಪೇಟೆ ಘಟಕದ ವತಿಯಿಂದ ತಾ. 18 ರಂದು ನಾರಾಯಣ ಗುರುಗಳ ಜಯಂತಿ ಹಾಗೂ ಓಣಂ ಆಚರಣೆ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ನಡೆಯಲಿದೆ.

ಪೊನ್ನಂಪೇಟೆ ವನಿತಾ ಸಂಘ, ಬಸವೇಶ್ವÀರ ಪುರುಷರ ಸ್ವಸಹಾಯ ಸಂಘ, ವನಿತಾ ಸ್ವಸಹಾಯ ಸಂಘ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಹೂವಿನ ರಂಗೋಲಿ ಸ್ಪರ್ಧೆ, ಪುರುಷರಿಗೆ ವಿವಿಧ ಕ್ರೀಡಾಕೂಟ, ನಾರಾಯಣ ಗುರುಗಳ ಮೂರ್ತಿ ಹಾಗೂ ಸಿಂಗಾರಿ ಮೇಳ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಘಟಕದ ಅಧ್ಯಕ್ಷ ಎಂ.ಎಂ. ದಿಲೀಪ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 6.30 ಕ್ಕೆ ಸದಸ್ಯರಿಗೆ ಪೂಕಳಂ ಸ್ಪರ್ಧೆ ನಡೆಯಲಿದೆ. 9 ಕ್ಕೆ ಗುರುಪೂಜೆ, 10 ಕ್ಕೆ ಧ್ವಜಾರೋಹಣ, 10.30 ಕ್ಕೆ ಪಟ್ಟಣದಲ್ಲಿ ಗುರುಗಳ ಮೂರ್ತಿ ಹಾಗೂ ಸಿಂಗಾರಿ ಮೇಳ ಮೆರವಣಿಗೆ ನಡೆಯಲಿದೆ. ಈ ಸಂದರ್ಭ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯಲ್ಲಿ ಹೆಚ್ಚು ಅಂಕಗಳಿಸಿರುವ ಸದಸ್ಯರ ಮಕ್ಕಳಿಗೆ ಪಾರಿತೋಷಕ ನೀಡಲಾಗುವದು. ಅಂಕಪಟ್ಟಿಯ ನಕಲು ಪ್ರತಿಯನ್ನು ತಾ. 16 ರೊಳಗೆ ನೀಡಬಹುದಾಗಿದೆ. ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪೊನ್ನಂಪೇಟೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಮೂವರು ಸೇವಕರುಗಳಿಗೆ ಸನ್ಮಾನ ನಡೆಯಲಿದೆ.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪಾ ನಂದಾಜಿ ಆಶೀರ್ವಚನ ನೀಡಲಿದ್ದಾರೆ. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಸದಸ್ಯೆ ಶ್ರೀಜಾ ಶಾಜಿ, ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ್ರಾ, ತಾ.ಪಂ. ಮಾಜಿ ಸದಸ್ಯ ಕೋಳೇರ ದಯಾ ಚೆಂಗಪ್ಪ ಪಾಲ್ಗೊಳ್ಳಲಿದ್ದಾರೆ.ಸರ್ಕಾರ ಗುರುಗಳ ಆಚರಣೆಗೆ ಮುಂದಾಗಿರುವದು ಸ್ವಾಗತಾರ್ಹ ಎಂದು ಈ ಸಂದರ್ಭ ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಕೆ.ಬಿ. ವಿನು, ಸದಸ್ಯ ಎಸ್. ಮಹೇಶ್ ಹಾಗೂ ಪೊನ್ನಂಪೇಟೆ ಘಟಕ ಸ್ಥಾಪಕಾಧ್ಯಕ್ಷ ಪದ್ಮನಾಭ್ ಇದ್ದರು.