ಸಿದ್ದಾಪುರ, ಡಿ. 9: ಮಾಲ್ದಾರೆ ಸಮೀಪದ ದಿಡ್ಡಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದ ಗಿರಿಜನರನ್ನು ಒಕ್ಕಲೆಬ್ಬಿಸಿದ ಕ್ರಮವನ್ನುಖಂಡಿಸಿ ಹಾಗೂ ಶಾಶ್ವತ ನಿವೇಶನ ನೀಡಬೇಕೆಂದು ಒತ್ತಾಯಿಸಿ ತಾ. 14 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಗಿರಿಜನ ಮುಖಂಡ ಜೆ.ಕೆ ಅಪ್ಪಾಜಿ ತಿಳಿಸಿದ್ದಾರೆ.
ಅರಣ್ಯದ ಗುಡಿಸಲುಗಳನ್ನು ತೆರವುಗೊಳಿಸಿದ ಬಳಿಕ ದಿಡ್ಡಳ್ಳಿಯ ಆಶ್ರಮ ಶಾಲೆಯ ಮುಂಭಾಗದ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸ ಮಾಕೊಂಡಿರುವ ಗಿರಿಜನರು ಅಲ್ಲಿಯೇ ಆಹಾರವನ್ನು ತಯಾರಿಸಿಕೊಂಡು ತಮ್ಮ ಮಕ್ಕಳೊಂದಿಗೆ ಬಿಡಾರ ಹೂಡಿದ್ದಾರೆ. ಬಂಧನದ ಬಳಿಕ ಇಂದು ಹಾಡಿಗೆ ಮರಳಿದ ಮುಖಂಡ ಜೆ.ಕೆ ಅಪ್ಪಾಜಿ, ಗಿರಿಜನರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಏಕಾಏಕಿ ಗಿರಿಜನರನ್ನು ಬೆಳ್ಳಂಬೆಳಗ್ಗೆ ಒಕ್ಕಲೆಬ್ಬಿಸಿ ಪೊಲೀಸರ ಮೂಲಕ ಜೆ.ಸಿ.ಬಿಯನ್ನು ತಂದು ಗುಡಿಸಲನ್ನು ಕೆಡವಿದ್ದಾರೆ. ಕಳೆದ ಆರು ತಿಂಗಳಿಂದ ಅಲ್ಲಿಯೇ ವಾಸವಿದ್ದು, ಆಗ ಏಕೆ ಅರಣ್ಯ ಇಲಾಖೆ ಮಾತನಾಡಲಿಲ್ಲ ಎಂದು ಪ್ರಶ್ನಸಿದರು. ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ಕೈಗೊಂಡು ಮಕ್ಕಳ ಹಾಗೂ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಅರಣ್ಯವನ್ನು ಕೆಲವರು ಒತ್ತುವರಿ ಮಾಡಿP Éೂಂಡಿದ್ದು, ಅರಣ್ಯ ಪ್ರದೇಶದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದಾರೆ. ಇದರ ಬಗ್ಗೆ ಇಲಾಖೆ ಏಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದರಲ್ಲದೇ, ತಾ. 14 ರಂದು ನೂರಾರು ಮಂದಿ ಗಿರಿಜನರೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಾಗುವದು. ಅರಣ್ಯ ಸಚಿವರು ಹಾಗೂ ಕಂದಾಯ ಸಚಿವರು ಸ್ಥಳಕ್ಕೆ ಭೇಟಿ ನೀಡುವವರೆಗೆ ತಾವು ಸ್ಥಳದಿಂದ ಕದಲುವದಿಲ್ಲ ಎಂದರು.
ಗಿರಿಜನ ಮುಖಂಡೆ ಮುತ್ತಮ್ಮ ಮಾತನಾಡಿ, ಶಾಶ್ವತ ಸೂರಿಗಾಗಿ ಬೆತ್ತಲೆ ಪ್ರತಿಭಟನೆ ನಡೆಸಲೂ ತಾವು ಸಿದ್ಧರಿರುವದಾಗಿ ತಿಳಿಸಿದರು.
ಒಟ್ಟಿನಲ್ಲಿ ತಮಗೆ ಶಾಶ್ವತ ಸೂರು ಸಿಗುವ ನಿರೀಕ್ಷೆಯಲ್ಲಿ ಮರದ ಕೆಳಗೆ ಚಳಿಯನ್ನೂ ಲೆಕ್ಕಿಸದೆ ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದು, ರಾಜಕೀಯ ಮುಖಂಡರ ಹಾಗೂ ಜನಪ್ರತಿನಿಧಿಗಳ ಭರವಸೆಯನ್ನು ನಂಬಿಕೊಂಡು ಕಾಲ ಕಳೆಯುತ್ತಿದ್ದಾರೆ.
ಅಧಿಕಾರಿಗಳಿಂದ ಲಂಚ...?!!
ಕಳೆದ ಆರು ತಿಂಗಳುಗಳಿಂದ ಅರಣ್ಯದಲ್ಲಿ ವಾಸಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಸುಮಾರು ರೂ. 6 ಲಕ್ಷ ಲಂಚ ಪಡೆದಿರುವದಾಗಿ ಜೆ.ಕೆ ಅಪ್ಪಾಜಿ ಆರೋಪಿಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಒಟ್ಟು ರೂ. 6.80 ಲಕ್ಷ ನೀಡಲಾಗಿದೆ. ಹೀಗಾಗಿ ಕಳೆದ 6 ತಿಂಗಳು ಅರಣ್ಯ ಇಲಾಖಾ ಅಧಿಕಾರಿಗಳು ಒಕ್ಕಲೆಬ್ಬಿಸಲು ಪ್ರಯತ್ನಿಸಲಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಬಹಿರಂಗ ಪಡಿಸುವದಾಗಿ ಅವರು ತಿಳಿಸಿದ್ದಾರೆ.
-ಎ.ಎನ್.ವಾಸು