ಕುಶಾಲನಗರ, ಸೆ. 7: ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥ ಮೂಲ ಉದ್ಭವ ಪವಿತ್ರ ಕುಂಡಿಕೆಯ ಮೇಲ್ಭಾಗ ಅಳವಡಿಸಲಾಗಿರುವ ಪ್ಲಾಸ್ಟಿಕ್ ಹೊದಿಕೆಯನ್ನು ತಕ್ಷಣ ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಕಾವೇರಿ ನದಿ ಸ್ವಚ್ಚತಾ ಆಂದೋಲನದ ಪ್ರಮುಖರು ದೇವಾಲಯ ಆಡಳಿತ ಅಧಿಕಾರಿಯನ್ನು ಆಗ್ರಹಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕುಂಡಿಕೆ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಅಳವಡಿಸಿದ್ದು ಈ ಮೂಲಕ ಭಕ್ತಾದಿಗಳಿಗೆ ಅಸಮಾಧಾನ ಉಂಟಾಗುವದರೊಂದಿಗೆ ಹಲವು ಬಾರಿ ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿಯ ಪ್ರಮುಖರು ಸೇರಿದಂತೆ ಜಿಲ್ಲೆಯ ಸಂಘಟನೆಗಳು ಇದನ್ನು ತೆರವುಗೊಳಿಸಲು ಆಗ್ರಹಿಸಿದ್ದರೂ ಯಾವದೇ ರೀತಿಯ ಕ್ರಮಕೈಗೊಳ್ಳದ ಬಗ್ಗೆ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು ಈ ಬಾರಿಯ ಪವಿತ್ರ ತೀರ್ಥೋದ್ಭವಕ್ಕೂ ಮುಂಚಿತವಾಗಿ ತೆರವುಗೊಳಿಸುವಂತೆ ಸಂಬಂಧಿಸಿದವರನ್ನು ಒತ್ತಾಯಿಸಿದ್ದಾರೆ.ಈ ನಿಟ್ಟಿನಲ್ಲಿ ಸಮಿತಿಯ ಸಂಚಾಲಕರಾದ ಎಂ.ಎನ್. ಚಂದ್ರಮೋಹನ್ ದೇವಾಲಯ ಆಡಳಿತ ಅಧಿಕಾರಿ ಸತೀಶ್‍ಕುಮಾರ್ ಅವರಿಗೆ ಲಿಖಿತ ದೂರು ನೀಡಿದ್ದು ಅಲ್ಲದೆ ಕ್ಷೇತ್ರದ ತಕ್ಕ ಮುಖ್ಯಸ್ಥರು, ಕ್ಷೇತ್ರದ ಅರ್ಚಕರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದು ತಪ್ಪಿದಲ್ಲಿ ಭಕ್ತಾದಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಬುಧವಾರದ ‘ಶಕ್ತಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ‘ಮತ್ತೆ ಕತ್ತಲೆಯ ಕೂಪದಲ್ಲಿ ಮಾತೆ ಕಾವೇರಿ’ ಎಂಬ ವಿಶೇಷ ವರದಿಗೆ ಕ್ಷೇತ್ರದ ಪ್ರಮುಖರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು ಪ್ಲಾಸ್ಟಿಕ್ ಹೊದಿಕೆಯನ್ನು ತೆರವುಗೊಳಿಸಲು ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಯಾವದೇ ರೀತಿಯ ಕ್ರಮಕೈ ಗೊಂಡಿಲ್ಲ ಎಂದು ಕ್ಷೇತ್ರದ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ತಿಳಿಸಿದ್ದಾರೆ.

5 ವರ್ಷಗಳ ಹಿಂದೆ ಕುಂಡಿಕೆಯ ಮೇಲೆ ಶಾಶ್ವತ ಹೊದಿಕೆ ನಿರ್ಮಾಣವಾಗಿತ್ತು. ಅದನ್ನು ಕಾರಣಾಂತರಗಳಿಂದ ತೆರವುಗೊಳಿಸಿ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಈ ಬಗ್ಗೆ ಭಕ್ತಾದಿಗಳಿಂದ ಹಾಗೂ ಜಿಲ್ಲೆಯ ಪ್ರಮುಖರಿಂದ ಅಸಮಾಧಾನ ವ್ಯಕ್ತಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ. ಕೂಡಲೇ ದೇವಾಲಯ ಆಡಳಿತ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಮೋಟಯ್ಯ ಆಗ್ರಹಿಸಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ಅವರು ಸೇರಿದಂತೆ ಹಲವರು ಈ ಬಗ್ಗೆ ಉಸ್ತುವಾರಿ .