ಮಡಿಕೇರಿ, ನ. 12: ತಲಕಾವೇರಿ ಜಾತ್ರೆಗೆ ಐತಿಹಾಸಿಕ ಹಿನ್ನೆಲೆಯ ಸಂಪ್ರದಾಯದಂತೆ ಭಾಗಮಂಡಲದಿಂದ ತಕ್ಕರುಗಳಾದ ಕೋಡಿ ಕುಟುಂಬಸ್ಥರು ಭಾಗಮಂಡಲದಿಂದ ದೇವರ ಆಭರಣಗಳನ್ನು ಒಯ್ಯುತ್ತಾರೆ. ದೇವಾಲಯ ಆಡಳಿತ ಮಂಡಳಿ ಅನೂಚಾನ ಕ್ರಮದಂತೆ ಕೋಡಿ ಕುಟುಂಬಸ್ಥರಿಗೆ ಆಭರಣಗಳನ್ನು ಹಸ್ತಾಂತರಿಸಿದ ಬಳಿಕ ತಲಕಾವೇರಿ ತೀರ್ಥೋದ್ಭವಕ್ಕೆ ಮುನ್ನ ಆಭರಣಗಳನ್ನು ಮಾತೆ ಕಾವೇರಿಯ ಸನ್ನಿಧಿಯಲ್ಲಿ ಅಲಂಕರಿಸಲಾಗುತ್ತದೆ. ಜಾತ್ರೆ ಬಳಿಕ ಆಭರಣಗಳನ್ನು ತೆಗೆದು ಮುಂದಿನ ಕಿರು ಸಂಕ್ರಮಣದವರೆಗೂ ಕೋಡಿ ಕುಟುಂಬಸ್ಥರು ತಲಕಾವೇರಿಯ ಕೊಠಡಿಯೊಂದರಲ್ಲಿ ಆಭರಣಗಳನ್ನು ಇರಿಸಿ ಕಾವಲು ಕಾಯಬೇಕು.
ರಾಜರ ಕಾಲದಲ್ಲಿ ಆಭರಣಗಳನ್ನು ಕಾಯಲು ವೀರರಾಜ ಖಡ್ಗವೊಂದನ್ನು ಬಳವಳಿಯಾಗಿ ಕೋಡಿ ಕುಟುಂಬದ ಹಿರಿಯರಿಗೆ ನೀಡಿದ್ದ. ಈ ಚಿತ್ರದಲ್ಲಿ ಕಾಣುವಂತೆ ಇತಿಹಾಸ ಕಾಲದ ಖಡ್ಗವನ್ನು ಈಗಿನ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರು ತಮ್ಮ ಕೈಯಲ್ಲಿ ಹಿಡಿದಿದ್ದಾರೆ. ಅವರೊಂದಿಗೆ ಪಾರುಪತ್ತೇಗಾರ ಪೊನ್ನಣ್ಣ ಅವರೂ ಇದ್ದಾರೆ.
ಪ್ರತಿ ವರ್ಷ ಒಂದು ತಿಂಗಳ ಕಾಲ ಆಭರಣಗಳನ್ನು ಕಾಯುವ ಕೆಲಸ ಕೋಡಿ ಕುಟುಂಬದ ಜವಾಬ್ದಾರಿಕೆಯಾಗಿದೆ. ಕನಿಷ್ಟ ಪಕ್ಷ ದೇವಾಲಯ ಆಡಳಿತ ಸಮಿತಿಯಿಂದ ಮುಂದಿನ ವರ್ಷದಿಂದಲಾದರೂ ಈಗ ಇರುವ ಕೊಠಡಿಯ ಸ್ಥಳದಲ್ಲಿಯೇ “ಸ್ಟ್ರಾಂಗ್ ರೂಂ” ಒಂದನ್ನು ನಿರ್ಮಿಸಿಕೊಡುವಂತೆ ತಕ್ಕ ಪ್ರಮುಖ ಕೋಡಿ ಮೋಟಯ್ಯ “ಶಕ್ತಿ” ಮೂಲಕ ವಿನಂತಿಸಿದ್ದಾರೆ. ಇದರಿಂದ ಆಭರಣ ರಕ್ಷಣಾ ಕಾರ್ಯ ಸುಸೂತ್ರವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.