ಮಡಿಕೇರಿ, ಡಿ. 28: ದಿಡ್ಡÀಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ನೈಜ ಹೋರಾಟವನ್ನು ಹತ್ತಿಕ್ಕುವದಕ್ಕಾಗಿ ಕೆಲವು ಭೂ ಮಾಲೀಕರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ತಟ್ಟಳ್ಳಿ ನಿವಾಸಿಗಳನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂಎಲ್‍ನ ಪ್ರಮುಖ ನಿರ್ವಾಣಪ್ಪ, ಕೊಡಗಿನ ಲೈನ್ ಮನೆಗಳಲ್ಲಿ ಜೀತದಾಳುಗಳಂತೆ ದುಡಿಯುತ್ತಿರುವ ಗಿರಿಜನರನ್ನು ಲೈನ್ ಮನೆಗಳಿಂದ ಮುಕ್ತಗೊಳಿಸುವದೇ ದಿಡ್ಡಳ್ಳಿ ಹೋರಾಟದ ಪ್ರಥಮ ಹೆಜ್ಜೆಯೆಂದು ಸ್ಪಷ್ಟಪಡಿಸಿದರು. ಆದಿವಾಸಿಗಳ ಸಂಕಷ್ಟದ ಬದುಕನ್ನು ಇಲ್ಲಿಯವರೆಗೆ ಅರಿತುಕೊಳ್ಳದ ಕೆಲವು ಭೂ ಮಾಲೀಕರು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ತಟ್ಟಳ್ಳಿ ಗಿರಿಜನರನ್ನು ದಿಡ್ಡಳ್ಳಿ ಮೇಲೆ ಎತ್ತಿಕಟ್ಟುತ್ತಿದ್ದಾರೆ. ಇದು ಗುಲಾಮಗಿರಿ ಶಾಶ್ವತವಾಗಿ ಇರಬೇಕೆಂದು ಅಭಿಲಾಷೆ ಪಡುವವರ ಷಡ್ಯಂತ್ರವೆಂದು ಆರೋಪಿಸಿದರು.
ಮಾಲ್ದಾರೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ಗ್ರಾಮಸ್ಥರ ಸಭೆಗೆ ಹೇಗೆ ಅವಕಾಶ ನೀಡಲಾಯಿತು ಎಂದು ಅವರು ಪ್ರಶ್ನಿಸಿದರು. ದಿಡ್ಡಳ್ಳಿ ಹೋರಾಟದಲ್ಲಿ ನಕ್ಸಲ್ ಹೋರಾಟಗಾರರು ನುಸುಳಿದ್ದಾರೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ, ಐಜಿಯವರೇ ನಕ್ಸಲರು ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದಿವಾಸಿಗಳಿಂದ ಹೋರಾಟಗಾರರು ಹಣ ಪಡೆದಿದ್ದಾರೆ ಎನ್ನುವ ಆರೋಪ ವನ್ನು ಕೆಲವು ಭೂ ಮಾಲೀಕರು ಮಾಡಿದ್ದು, ಇದನ್ನು ಕೇಳಲು ಇವರು ಯಾರೆಂದು ಪ್ರಶ್ನಿಸಿದ ನಿರ್ವಾಣಪ್ಪ, ನಿವೇಶನ ವಂಚಿತರಿಗೆ ಅನ್ಯಾಯವಾಗಿ ದ್ದರೆ ಮತ್ತು ಹಣ ಪಡೆದಿದ್ದರೆ ಆರೋಪ ಮಾಡಲಿ ಎಂದರು.
ಹೋರಾಟದ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಅವರು, ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದರು. ಲೈನ್‍ಮನೆಯಲ್ಲಿ ಇಂದಿಗೂ ಆದಿವಾಸಿಗಳು ಜೀತದ ಬದುಕನ್ನು ಸಾಗಿಸುತ್ತಿದ್ದು, ಈ ಬಗ್ಗೆ ಸರ್ಕಾರದ ನಿಯೋಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಗುಡಿಸಲುಗಳ ತೆರವು ಕಾರ್ಯಾಚರಣೆ ಸಂದರ್ಭ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿ ಕೊಂಡು ಕ್ರಮ ಕೈಗೊಳ್ಳಬೇಕು, 8 ಮಂದಿ ಆದಿವಾಸಿ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣ ಗಳನ್ನು ಹಿಂಪಡೆಯಬೇಕು, ಗಿರಿಜನ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಯಾದೇವಿ ಗಲಗಲಿ ಅವರು ಕರ್ತವ್ಯ ಲೋಪದ ಆರೋಪವನ್ನು ಎದುರಿಸುತ್ತಿದ್ದು, ಇವರನ್ನು ಸೇವೆ ಯಿಂದ ಅಮಾನತು ಗೊಳಿಸಬೇಕು ಎಂದು ನಿರ್ವಾಣಪ್ಪ ಒತ್ತಾಯಿಸಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್ ಮಾತನಾಡಿ, ದಿಡ್ಡಳ್ಳಿ ಹೋರಾಟಕ್ಕೆ ಆದಿವಾಸಿಗಳ ಒಗ್ಗಟ್ಟಿನಿಂದಾಗಿ ಫಲ ದೊರೆತಿದೆ ಎಂದು ಅಭಿಪ್ರಾಯಪಟ್ಟರು. ಇಂತಹ ಹೋರಾಟವನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಸರ್ಕಾರ ನೀಡಲು ಉದ್ದೇಶಿಸಿರುವ ಮೂಲಭೂತ ಸೌಲಭ್ಯಗಳಿಗೆ ತಡೆಯೊಡ್ಡುವ ಕುತಂತ್ರ ನಡೆಯುತ್ತಿದೆ. ಸರ್ಕಾರ ಇದಕ್ಕೆ ಮಣಿಯದೆ ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳ ಬೇಕೆಂದು ಒತ್ತಾಯಿಸಿದರು.
ದಿಡ್ಡಳ್ಳಿ ಗೆಲ್ಲಲಿದೆ, ತಟ್ಟಳ್ಳಿ ಸೋಲು ವದಿಲ್ಲವೆಂದು ಅಭಿಪ್ರಾಯಪಟ್ಟ ಅಮಿನ್ ಮೊಹಿಸಿನ್, ದಿಡ್ಡಳ್ಳಿಯ ನಿರಾಶ್ರಿತರಿಗೆ ಸಿಗುವ ಎಲ್ಲಾ ಸೌಲಭ್ಯಗಳು ತಟ್ಟಳ್ಳಿ ಜನರಿಗೂ ಸಿಗಬೇಕೆಂದು ಒತ್ತಾಯಿಸಿದರು.
ಜಿಲ್ಲೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಸಚಿವರಾದ ಆಂಜನೇಯ ಅವರು, ದಿಡ್ಡಳ್ಳಿ ನಿರಾಶ್ರಿತರಿಗೆ ಟೆಂಟ್‍ಗಳನ್ನು ನಿರ್ಮಿಸಿಕೊಡುವಂತೆ ಸೂಚನೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಸೌಲಭ್ಯ ದೊರಕಿಲ್ಲ ವೆಂದು ಆರೋಪಿಸಿದ ಅಮಿನ್ ಮೊಹಿಸಿನ್, ರಾಜ್ಯದ ಎಲ್ಲಾ ಆದಿವಾಸಿಗಳಿಗೆ
ಸಮಿತಿಯ ಪ್ರಮುಖ ವಸಂತ್ ಮಾತನಾಡಿ, 2014ರಲ್ಲಿ ಹೋರಾಟಗಾರರಾದ ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್ ಅವರು ಸಮಾಜದ ಮುಖ್ಯವಾಹಿನಿಗೆ ಬಂದು ದುರ್ಬಲರ ಪರವಾಗಿ ಹೋರಾಟ ನಡೆಸುತ್ತಿದ್ದಾರೆ. ದುರ್ಬಲರಿಗೆ ಹಕ್ಕುಗಳನ್ನು ದೊರಕಿಸಿ ಕೊಡುವದಕ್ಕಾಗಿ ಹೋರಾಟದಲ್ಲಿ ಪಾಲ್ಗೊಳ್ಳುವದು ತಪ್ಪೆ ಎಂದು ಪ್ರಶ್ನಿಸಿದರು. ದಿಡ್ಡಳ್ಳಿ ವ್ಯಾಪ್ತಿಯಲ್ಲಿ ವಿಧಿಸಲಾಗಿರುವ ನಿಷೇದಾಜ್ಞೆಯನ್ನು ತೆರವುಗೊಳಿಸದಿದ್ದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೊರಾಟಗಾರ್ತಿ ಜೆ.ಕೆ. ಮುತ್ತಮ್ಮ ಮಾತನಾಡಿ, ರಾಜ್ಯಮಟ್ಟದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್‍ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಡ್ಕಾರ್ ಹಾಗೂ ಆದಿವಾಸಿ ಮುಖಂಡ ಸ್ವಾಮಿ ಉಪಸ್ಥಿತರಿದ್ದರು.