ಭಾಗಮಂಡಲ, ಅ. 6: ದೊಡ್ಡಪುಲಿಕೋಟು ಗ್ರಾಮದಲ್ಲಿ ತಂಡ್ರ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ನೂತನ ಸೇತುವೆಯ ಮೂಲಕ ವಾಹನ ಸಂಚಾರ ಆರಂಭಗೊಂಡ ಸ್ವಲ್ಪವೇ ಸಮಯದಲ್ಲಿ ಚಾಲಕರಿಗೆ ಸಮಸ್ಯೆ ತಂದೊಡ್ಡಿದೆ. ಸೇತುವೆ ತಗ್ಗಿನಲ್ಲಿದ್ದು, ಸಂಪರ್ಕ ರಸ್ತೆಯ ಎರಡೂ ಭಾಗ ಜಗ್ಗಿರುವದು ಕಂಡು ಬರುತ್ತಿದೆ. ರಸ್ತೆಗೆ ಹೊಂದಿಕೊಂಡಂತೆ ಮಣ್ಣು ಹಾಕಿದ್ದು, ಜಗ್ಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಾಲದೆಂಬಂತೆ ರಸ್ತೆಯಿಂದ ಹರಿದು ಬರುವ ಮಳೆ ನೀರು ಸೇತುವೆ ಮೇಲೆ ಸಂಗ್ರಹಗೊಳ್ಳುತ್ತಿರುವದು ವಾಹನ ಚಾಲಕರ ಚಿಂತೆಗೆ ಕಾರಣವಾಗಿದೆ. ಒಟ್ಟಿನಲ್ಲಿ ದೊಡ್ಡಪುಲಿಕೋಟು ಗ್ರಾಮದಲ್ಲಿ ತಂಡ್ರ ಹೊಳೆಗೆ ನೂತನವಾಗಿ ನಿರ್ಮಿಸಿರುವ ಸೇತುವೆಗೆ ಹಾನಿಯಾಗಿದ್ದು, ಕುಸಿತದ ಭೀತಿಯನ್ನೆದುರಿಸುತ್ತಿದೆ. ಇತ್ತೀಚೆಗಷ್ಟೇ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸಂಚಾರ ಆರಂಭಗೊಂಡ ಕೆಲವೇ ದಿನಗಳಲ್ಲಿ ತಡೆಗೋಡೆ ಬಿರುಕು ಬಿಟ್ಟಿರುವದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ದೊಡ್ಡಪುಲಿಕೋಟು, ಪೇರೂರು, ಸಣ್ಣಪುಲಿಕೋಟು, ಅಯ್ಯಂಗೇರಿ, ಕೋರಂಗಾಲ ಗ್ರಾಮಗಳ ಜನತೆ ಪ್ರತಿವರ್ಷ ಮಳೆಗಾಲದಲ್ಲಿ ಹತ್ತಾರು ಸಮಸ್ಯೆಗಳಿಗೆ ಸಿಲುಕುತ್ತಿದ್ದರು. ಭಾಗಮಂಡಲ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿದಾಗ ಪ್ರವಾಹ ಬಂದು ಈ ಗ್ರಾಮಗಳು ದ್ವೀಪಗಳಾಗುತ್ತಿದ್ದವು. ವಾಹನ ಸಂಪರ್ಕಗಳಿಲ್ಲದೇ ಅತ್ತ ಭಾಗಮಂಡಲಕ್ಕೂ ಇತ್ತ ನಾಪೋಕ್ಲುವಿಗೂ ತೆರಳಲಾಗದೇ ತೊಂದರೆ ಅನುಭವಿಸುತ್ತಿದ್ದರು. ಬಲ್ಲಮಾವಟಿ ಮತ್ತು ಪುಲಿಕೋಟು ಗ್ರಾಮಗಳ ಮಧ್ಯೆ ಹರಿಯುವ ತಂಡ್ರ ಹೊಳೆ ನೀರಿನ ಪ್ರವಾಹ ಸೇತುವೆ ಮೇಲಿನಿಂದ ಹರಿಯುವದೇ ಇದಕ್ಕೆ ಕಾರಣವಾಗಿತ್ತು. ಈ ಹೊಳೆಯು ಸಮೀಪದಲ್ಲಿಯೇ ಹರಿಯುವ ಕಾವೇರಿ ನದಿಯನ್ನು ಸೇರುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಹೆಚ್ಚಾದಂತೆ ಈ ಹೊಳೆಯ ನೀರಿನ ಮಟ್ಟ ಹೆಚ್ಚಾಗಿ ಸೇತುವೆ ಮೇಲೆ 10 ರಿಂದ 12 ಅಡಿಗಳಷ್ಟು ನೀರು ಸಂಗ್ರಹವಾಗಿ ಸಂಚಾರ ಕಡಿತಗೊಳ್ಳುತಿತ್ತು. ಈ ಸೇತುವೆಯು ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲ್ಪಟ್ಟಿದ್ದು, ಶಿಥಿಲಾವಸ್ಥೆ ತಲಪಿದ್ದರಿಂದ 1.58 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ ನಡೆಯಿತು. ಹಳೆ ಸೇತುವೆ ಮೂಲೆ ಗುಂಪಾಗಿ ನಾಪೋಕ್ಲು - ಭಾಗಮಂಡಲ ನಡುವಿನ ತಂಡ್ರ ಹೊಳೆಗೆ ನೂತನ ಸೇತುವೆ ನಿರ್ಮಾಣವಾಯಿತು. ಗ್ರಾಮಸ್ಥರ ಸಂತಸ ಹೆಚ್ಚು ಉಳಿಯಲಿಲ್ಲ.

ಸಂಚಾರ ಆರಂಭಗೊಂಡ ಕೆಲವೇ ದಿನಗಳಲ್ಲಿ ತಡೆಗೋಡೆ ಬಿರುಕು ಬಿಟ್ಟಿರುವದು, ಸೇತುವೆಯ ಇಕ್ಕೆಲಗಳಲ್ಲಿ ಬಿರುಕು ಕಾಣಿಸಿಕೊಂಡಿರುವದು ಗ್ರಾಮಸ್ಥರ ಚಿಂತೆಗೆ ಕಾರಣವಾಗಿದೆ. ದ್ವಿ ಚಕ್ರ ವಾಹನ ಸವಾರರಿಗೂ ಈ ಸೇತುವೆ ಸಮಸ್ಯೆಗೆ ಕಾರಣವಾಗುತ್ತಿದೆ. ಇಲ್ಲಿ ವೇಗ ನಿಯಂತ್ರಣ ಇಲ್ಲದಿದ್ದರೆ, ಆಯ ತಪ್ಪಿ ಕೆಳಗೆ ಬೀಳುವ ಪರಿಸ್ಥಿತಿಯೂ ಇದೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ.

- ಸುನಿಲ್ ಕುಯ್ಯಮುಡಿ