ಮಡಿಕೇರಿ, ಜೂ. 24: ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ನಿಯಂತ್ರಣಕ್ಕೆ ಜಾಗೃತಿ ಅಗತ್ಯ, ಆ ದಿಸೆಯಲ್ಲಿ ಆರೋಗ್ಯ ಶಿಕ್ಷಣ ಮತ್ತು ಮಾರ್ಗದರ್ಶನ ನೀಡಲಾಗುತ್ತಿದೆ. ಜೊತೆಗೆ ಫಾಗಿಂಗ್ (ಧೂಮೀಕರಣ) ಮತ್ತು ಲಾವಾ ನಾಶಕವನ್ನು ಸಿಂಪಡಿಸುವ ಕಾರ್ಯಕ್ರಮ ಶುಕ್ರವಾರದಿಂದ ಆರಂಭವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ತಿಳಿಸಿದ್ದಾರೆ.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು, ಜಿಲ್ಲೆಯಲ್ಲಿ ಎರಡು ಶಂಕಿತ ಡೆಂಗಿ ಪ್ರಕರಣ ವರದಿಯಾಗಿದೆ. ಜನವರಿಯಿಂದ ಇದುವರೆಗೆ 22 ದೃಢಪಟ್ಟ ಡೆಂಗಿ ಪ್ರಕರಣಗಳು, 5 ಮಲೇರಿಯಾ ಪ್ರಕರಣಗಳು ಕಂಡುಬಂದಿದೆ. ಚಿಕೂನ್ ಗುನ್ಯಾ ಸಂಬಂಧಿಸಿದಂತೆ ಯಾವದೇ ಪ್ರಕರಣ ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ಸೊಳ್ಳೆ ಕಚ್ಚುವದರಿಂದ ಚಿಕೂನ್ ಗುನ್ಯಾ ಮತ್ತು ಡೆಂಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ಮಳೆಗಾಲದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವದು ಅಗತ್ಯ. ಸೊಳ್ಳೆಯಿಂದ ರಕ್ಷಣೆ ಪಡೆಯುವದು ಅತ್ಯಗತ್ಯವಾಗಿದೆ. ಸೊಳ್ಳೆ ಪರದೆ ಅಳವಡಿಸುವದು, ಮೈತುಂಬಾ ಬಟ್ಟೆ ಹಾಕಿಕೊಳ್ಳುವದು, ಸೊಳ್ಳೆಗಳು ಉತ್ಪತ್ತಿಯಾಗದಂತೆ ಗಮನ ಹರಿಸುವದು, ನೀರು ನಿಲ್ಲದಂತೆ ನೋಡಿಕೊಳ್ಳುವಂತಾಗಬೇಕು ಎಂದು ಸಲಹೆ ಮಾಡಿದರು.

ಡೆಂಗಿ ತಡೆಗೆ ನಿರ್ದಿಷ್ಟವಾದ ಔಷಧವಿಲ್ಲ. ಡೆಂಗಿ ರಕ್ತಸ್ರಾವದಿಂದ ಕೂಡಿದ ತೊಂದರೆಯಾಗಿದೆ. ಡೆಂಗಿ ಬರದಂತೆ ಮುನ್ನೆಚ್ಚರಿಕೆ ವಹಿಸುವದು ಮುಖ್ಯ ಎಂದರು.

ಜಿಲ್ಲೆಯಲ್ಲಿ 138 ಶಂಕಿತ ಪ್ರಕರಣಗಳು ಇದ್ದು, 138 ರಕ್ತ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದರಲ್ಲಿ 22 ದೃಢೀಕೃತ ಡೆಂಗಿ ಪ್ರಕರಣಗಳು ಎಂದು ಪತ್ತೆ ಹಚ್ಚಲಾಗಿದೆ. ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 8, ಭಾಗಮಂಡಲ 5, ಚೇರಂಬಾಣೆ 2, ನಗರ ಆರೋಗ್ಯ ಕೇಂದ್ರ 2, ಗೌಡಳ್ಳಿ 2, ಬಿಳಿಗೇರಿ 1, ಸುಂಟಿಕೊಪ್ಪ 1, ಕಾಕೋಟುಪರಂಬು 1 ಒಟ್ಟು 22 ದೃಢೀಕೃತ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.

ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕರಿಕೆಯಲ್ಲಿ 4,844 ಜನಸಂಖ್ಯೆ ಇದ್ದು, 40 ಶಂಕಿತ ಡೆಂಗಿ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ತಾ. 16 ರಿಂದ 23 ರವರೆಗೆ ಆರೋಗ್ಯ ಶಿಕ್ಷಣ ಅರಿವು ಕಾರ್ಯಕ್ರಮ, ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನ ಚಟುವಟಿಕೆ ಹಾಗೂ ಅರಿವು ಮೂಡಿಸುವ ಜಾಥಾ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಆರೋಗ್ಯ ಕಾರ್ಯಕರ್ತರು ಗ್ರಾಮಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಜ್ವರ ಸಮೀಕ್ಷೆ ನಡೆಸಿ ಹೆಚ್ಚಿನ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ವರದಿ ಮಾಡುವ ಮತ್ತು ಉಪ ಕೇಂದ್ರದ ಮಟ್ಟದಲ್ಲಿ ತಂಡಗಳನ್ನು ರಚಿಸಿ, ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಂದು ಮನೆಯಲ್ಲಿಯೂ ಈಡಿಸ್ ರೋಗವಾಹಕ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಸಮೀಕ್ಷೆ ನಡೆಸಿ, ಅವುಗಳ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ತಾ. 9 ರಂದು ನಡೆದ ಎಲ್ಲಾ ಜಿಲ್ಲಾ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜಿಲ್ಲೆಯ ನೋಡಲ್ ಅಧಿಕಾರಿಗಳು ಆಯಾಯ ಜಿಲ್ಲೆಗಳಿಗೆ ಹೋಗಿ ಕೊಳಚೆ ಪ್ರದೇಶಗಳಲ್ಲಿ, ನಿರ್ಮಾಣ ಪ್ರದೇಶಗಳಲ್ಲಿ, ಶಿಕ್ಷಣ ಸಂಸ್ಥೆಗಳು ಮತ್ತು ಹೊಟೇಲ್‍ಗಳು, ಸರ್ಕಾರಿ ಕಟ್ಟಡಗಳಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ, ಆಸ್ಪತ್ರೆಗಳಲ್ಲಿ, ಕಾರ್ಖಾನೆಗಳಿರುವ ಪ್ರದೇಶಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಲ್ಲಾ ಅವಶ್ಯಕ ಔಷಧಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದ್ದು, ರೋಗಪೀಡಿತರ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲಾ ಮಟ್ಟದಿಂದ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು, ಜಿಲ್ಲಾ ಎಂಟಮಾಲಜಿಸ್ಟ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರುಗಳು ಇವರನ್ನೊಳಗೊಂಡ ತಂಡವು ರೋಗಪೀಡಿತ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾ ರೋಗ ನಿಯಂತ್ರಣ ಕ್ರಮಗಳ ಅನುಷ್ಠಾನದ ಪರಿಶೀಲನೆ ಮತ್ತು ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಲ್ಲಾ ಅವಶ್ಯಕ ಔಷಧಗಳನ್ನು ಈಗಾಗಲೇ ಸರಬರಾಜು ಮಾಡಲಾಗಿದ್ದು ರೋಗಪೀಡಿತರ ಸೂಕ್ತ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ವೀರಾಜಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು ಇದ್ದರು.