ಮಡಿಕೇರಿ, ಜು. 8: ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.

ಅಧಿವೇಶನದಲ್ಲಿ ಹೋರಾಟ : ಬೋಪಯ್ಯ

ಡಿವೈಎಸ್ಪಿಯಾಗಿದ್ದ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಅವರ ಸಹೋದರನ ಮೂಲಕ ಮುಚ್ಚಿ ಹಾಕುವ ಯತ್ನವನ್ನು ಸರ್ಕಾರ ಮಾಡಿದೆ. ಇದು ಜಿಲ್ಲೆಗೆ ಮಾಡಿದ ಅವಮಾನವಾಗಿದ್ದು, ಪ್ರಾಮಾಣಿಕ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಲ್ಲಿ ರಕ್ಷಣೆ ಸಿಗುತ್ತಿಲ್ಲ. ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮಾಧ್ಯಮದೊಂದಿಗೆ ತನಗೆ ಸಚಿವರಾದ ಕೆ.ಜೆ. ಜಾರ್ಜ್, ಹಿರಿಯ ಅಧಿಕಾರಿಗಳಾದ ಪ್ರಸಾದ್ ಹಾಗೂ ಮೊಹಂತಿ ಅವರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತಕ್ಷಣ ಸಚಿವರಾದ ಜಾರ್ಜ್ ಅವರು ರಾಜೀನಾಮೆ ಸಲ್ಲಿಸಬೇಕು. ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೋಮವಾರ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸಚಿವರು ರಾಜೀನಾಮೆ ನೀಡುವವರೆಗೆ ಹೋರಾಟ ಕೈಗೊಳ್ಳಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಸರ್ಕಾರ ಹಠಾವೋ ಹೋರಾಟ : ರಂಜನ್

ದಕ್ಷ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡುತ್ತಿಲ್ಲ. ರಾಜ್ಯ ಸರ್ಕಾರದಿಂದ ಹಲವು ಮಂದಿ ದಕ್ಷ ಅಧಿಕಾರಿಗಳು ಕಿರುಕುಳ ಅನುಭವಿಸಿದ್ದಾರೆ. ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರಾದ ಕೆ.ಜೆ. ಜಾರ್ಜ್ ಅವರ ವಿರುದ್ಧ ಆರೋಪಗಳು ಕೇಳಿ ಬಂದಿವೆ. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎನ್. ಪ್ರಸಾದ್ ಹಾಗೂ ಮೊಹಂತಿ ಅವರು ಕಿರುಕುಳ ನೀಡಿರುವ ಆರೋಪವಿದೆ. ಸಚಿವರಾದ ಕೆ.ಜೆ. ಜಾರ್ಜ್ ಅವರು ತಕ್ಷಣ ರಾಜೀನಾಮೆ ಸಲ್ಲಿಸಬೇಕು. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ರಾಜೀನಾಮೆ ನೀಡದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸರ್ಕಾರ ಹಠಾವೋ ಹೋರಾಟ ಹಮ್ಮಿಕೊಳ್ಳಲಾಗುವದು. ಗಣಪತಿ ಅವರು ಆತ್ಮಹತ್ಯೆಗೂ ಮುನ್ನ ಡೆತ್‍ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಅದನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಆರೋಪಿಸಿದರು.

ಪ್ರಾಮಾಣಿಕ ಅಧಿಕಾರಿಗಳ ಧಮನ : ಮನು

ಪ್ರಾಮಾಣಿಕ ಅಧಿಕಾರಿಗಳನ್ನು ಧಮನ ಮಾಡುವ ಕೆಲಸ ರಾಜ್ಯ ಸರ್ಕಾರ ನಿರಂತರವಾಗಿ ಮಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೂವರು ದಕ್ಷ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಓರ್ವ ಅಧಿಕಾರಿ ರಾಜೀನಾಮೆ ಸಲ್ಲಿಸಿದ್ದಾರೆ. ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರನ್ನು ವಜಾಗೊಳಿಸಿ ಬಂಧಿಸುವ ಅಗತ್ಯವಿದೆ. ಜೊತೆಗೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿ ಸಿಬಿಐ ತನಿಖೆಗೊಳಪಡಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಎ.ಕೆ. ಮನುಮುತ್ತಪ್ಪ ಆಗ್ರಹಿಸಿದ್ದಾರೆ.

ಪ್ರಕರಣ ತಿರುಚುವ ಯತ್ನ : ತಿಮ್ಮಯ್ಯ

ಆತ್ಮಹತ್ಯೆ ಪ್ರಕರಣವನ್ನು ಸಂಪೂರ್ಣವಾಗಿ ತಿರುಚುವ ಯತ್ನವನ್ನು ಸರ್ಕಾರ ಹಾಗೂ ಹಿರಿಯ ಅಧಿಕಾರಿಗಳು ಮಾಡುತ್ತಿದ್ದಾರೆ. ಆತ್ಮಹತ್ಯೆಗೂ ಮುನ್ನ ಮಾಧ್ಯಮದೊಂದಿಗೆ ಗಣಪತಿ ಅವರು ಸಚಿವ ಜಾರ್ಜ್, ಹಿರಿಯ ಅಧಿಕಾರಿಗಳಾದ ಪ್ರಸಾದ್ ಹಾಗೂ ಮೊಹಂತಿ ಅವರ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು. ಡೆತ್‍ನೋಟ್ ಕೂಡ ದೊರೆತಿರುವ ಬಗ್ಗೆ ಉಲ್ಲೇಖವಿದೆ. ಹೀಗಿದ್ದರೂ ಕೂಡ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಗಣಪತಿ ಅವರ ಸಹೋದರನ ಹೇಳಿಕೆಯಲ್ಲೂ ಗೊಂದಲಗಳು ಇವೆ. ಈ ಬಗ್ಗೆ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡ ಮಾದೇಟಿರ ತಿಮ್ಮಯ್ಯ ಆಗ್ರಹಿಸಿದ್ದಾರೆ.

ಸಹೋದರನ ಹೇಳಿಕೆ ಕಾಲ್ಪನಿಕ : ತಮ್ಮಯ್ಯ

ಗಣಪತಿ ಅವರು ಮಾಧ್ಯಮದ ಮುಂದೆ ಹೇಳಿರುವದೆಲ್ಲವೂ ಕಾಲ್ಪನಿಕವಾಗಿದೆ. ಆರೋಪದಲ್ಲಿ ಯಾವದೇ ಹುರುಳಿಲ್ಲ. ಗಂಭೀರವಾದ ಆರೋಪವನ್ನು ಮಾಡಿಲ್ಲ. ಹಲವು ದಿನಗಳಿಂದ ಅಸೌಖ್ಯದಿಂದ ಇದ್ದರು. ಈ ಬಗ್ಗೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಕೆಲಸದ ಒತ್ತಡ, ಆರೋಗ್ಯದ ಸಮಸ್ಯೆಯಿಂದಾಗಿ ಗಣಪತಿ ಅವರು ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು. ಅಲ್ಲದೆ ಅವರು ಯಾವದೇ ಡೆತ್‍ನೋಟ್ ಬರೆದಿಟ್ಟಿಲ್ಲ ಎಂದು ಗಣಪತಿ ಅವರ ಸಹೋದರ ಬೆಂಗಳೂರಿನಲ್ಲಿ ಡಿವೈಎಸ್ಪಿಯಾಗಿರುವ ಎಂ.ಕೆ. ತಮ್ಮಯ್ಯ ತಿಳಿಸಿದ್ದಾರೆ.

ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ : ಐ.ಜಿ.

ಡಿವೈಎಸ್ಪಿಯಾಗಿದ್ದ ಗಣಪತಿ ಅವರು ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಅನಾರೋಗ್ಯದಿಂದಿದ್ದರು. ಈ ಹಿನ್ನೆಲೆಯಲ್ಲಿ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು. ಈ ಬಗ್ಗೆ ದಾಖಲೆಗಳಿವೆ ಎಂದು ಐ.ಜಿ. ಬಿ.ಕೆ.ಸಿಂಗ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದರು.

ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು

ಗಣಪತಿ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಸಮಸ್ಯೆಯನ್ನು ಎದುರಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು. ಇದೊಂದು ವಿಷಾದನೀಯ ಬೆಳವಣಿಗೆ ಅವರ ಕುಟುಂಬಕ್ಕೆ ಆಘಾತ ತಂದ ವಿದ್ಯಮಾನ. ಅವರ ಸಾವಿನ ಹಿನ್ನೆಲೆಯ ತನಿಖೆ ಪ್ರಾಮಾಣಿಕವಾಗಿ ನಡೆಯಬೇಕು ಎಂದು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ತಿಳಿಸಿದ್ದಾರೆ.