*ಗೋಣಿಕೊಪ್ಪಲು, ಜ. 17: ಭವಿಷ್ಯದಲ್ಲಿ ನಗದು ರಹಿತ ವ್ಯವಹಾರಗಳನ್ನು ಮಾಡುವದರಿಂದ ಭಾರತದ ಆರ್ಥಿಕ ಬೆಳವಣಿಗೆಯ ಜೊತೆಗೆ ಕಪ್ಪು ಹಣದ ನಿಯಂತ್ರಣ, ಭ್ರಷ್ಟಾಚಾರ, ನಕಲು ನೋಟಿನ ವಹಿವಾಟುಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಜಿಲ್ಲಾ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅರುಣ್ ಕುಮಾರ್ ಅಭಿಪ್ರಾಯಪಟ್ಟರು.ಪೊನ್ನಂಪೇಟೆ ಕೃಷಿ ಅರಣ್ಯ ಮಹಾ ವಿದ್ಯಾಲಯದಲ್ಲಿ ನಡೆದ ವಿತ್ತೀಯ ಸಾಕ್ಷರತ ಆಂದೋಲನ ಹಾಗೂ ಡಿಜಿಟಲ್ ಎಕನಾಮಿಯ, ನಗದು ರಹಿತ, ಡಿಜಿಟಲ್ ಇಂಡಿಯಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಡಿಜಿಟಲ್ ಇಂಡಿಯಾದ ಉಗಮ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ವಿಷಯಗಳನ್ನು, ಹಣ ನಗದೀಕರಣ ಧ್ಯೇಯೋದ್ದೇಶಗಳನ್ನು, ನೋಟು ರಹಿತ ಹಣ ವರ್ಗಾವಣೆಯನ್ನು, ಬ್ಯಾಂಕ್ ಅಪ್ಲಿಕೇಷನ್ ಕ್ಯಾನ್ ಮೊಬೈಲ್‍ಗಳ ಮೂಲಕ ಬ್ಯಾಂಕ್‍ಗಳಿಗೆ ಹಣ ಸಂಧಾವಣೆಯ ವಹಿವಾಟು ಮಾಡುವದು ಹೇಗೆ ಎಂದು ಪವರ್ ಪಾಯಿಂಟ್ ಮೂಲಕ ವಿವರಿಸಿದರು.

ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರುಗಳಿಗೆ ಕ್ಯಾನ್ ಮೊಬೈಲ್ ವ್ಯವಹಾರಗಳನ್ನು ಆಂಡ್ರಾಯಿಡ್‍ಗಳ ಮೂಲಕ ಹಣ ವರ್ಗಾವಣೆ ಪಾತ್ಯಕ್ಷಿಕೆಯ ಮೂಲಕ ವಿವರಿಸಲಾಯಿತು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು, ವಿದ್ಯಾರ್ಥಿಗಳು, ಕಾಲೇಜಿನ ಮುಖ್ಯ ಆವರಣದಿಂದ ಬ್ಯಾನರ್ ಹಿಡಿದು ಭಿತ್ತಿ ಪತ್ರಗಳನ್ನು ಹಂಚುತ್ತಾ, ಡಿಜಿಟಲ್ ಇಂಡಿಯಾದ ಬಗ್ಗೆ ಘೋಷಣೆಗಳನ್ನು ಹಾಕುತ್ತಾ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಡಿಜಿಟಲ್ ಇಂಡಿಯಾದ ಬಗ್ಗೆ ಜನ ಜಾಗೃತಿ ಮೂಡಿಸಲಾಯಿತು.

ಕಾಲೇಜು ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜಕ ಡಾ. ರವಿಕುಮಾರ್, ಸಹಾಯಕ ವಿದ್ಯಾರ್ಥಿ ಕಲ್ಯಾಣಿ ನಿರ್ದೇಶಕ ಡಾ. ಎಂ. ಜಡೇಯಗೌಡ ಹಾಜರಿದ್ದರು.