ಕೂಡಿಗೆ, ಜ. 19: ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಇವರ ವತಿಯಿಂದ ತೊರೆನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಗುಂಪುಗಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗದು ರಹಿತ ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಎನ್.ಎಂ. ಕುಮಾರಪ್ಪ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳ ಮೂಲಕ ರಚನೆಗೊಂಡಿರುವ ಸ್ವ-ಸಹಾಯ ಮತ್ತು ಸ್ತ್ರೀ ಶಕ್ತಿ ಗುಂಪುಗಳ ಆರ್ಥಿಕ ಬಲವರ್ಧನೆಗೆ ಸಂಘದ ವತಿಯಿಂದ ಎಲ್ಲಾ ರೀತಿಯ ಸಹಕಾರ ಮಾಡಲಾಗುತ್ತದೆ.

ಗುಂಪಿನವರು ಉಳಿತಾಯ ಮಾಡುವದರ ಮೂಲಕ ಆರ್ಥಿಕ ಜೀವನದ ಉತ್ತಮ ಸ್ಥಿತಿಗೆ ಈ ಯೋಜನೆಯು ಬಹು ಉಪಯುಕ್ತವಾಗಿರುತ್ತದೆ ಎಂದರು.

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಸ್ವ-ಸಹಾಯ ಗುಂಪುಗಳ ನೋಡಲ್ ಅಧಿಕಾರಿ ತುಂಗರಾಜ್ ಮಾತನಾಡಿ, ದೇಶದಲ್ಲಿ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಇದರ ಯೋಜನೆಯನ್ವಯ ಕೇಂದ್ರ ಸರಕಾರದ ಮಾರ್ಗದರ್ಶನದಲ್ಲಿ ಇದೀಗ ನೋಟುಗಳ ಅಮಾನ್ಯ ಗೊಂಡಿರುವ ಹಿನ್ನೆಲೆಯಲ್ಲಿ ವ್ಯವಹಾರವನ್ನು ನಡೆಸಲು ನಗದು ರಹಿತ ಡಿಜಿಟಲ್ ಮೂಲಕ ವ್ಯವಹಾರ ವಹಿವಾಟುಗಳನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಕೇಂದ್ರ ಬ್ಯಾಂಕಿನ ಆರ್ಥಿಕ ನೋಡಲ್ ಅಧಿಕಾರಿ ರೋಹಿತ್ ಮತ್ತು ಕುಶಾಲನಗರ ಸಹಕಾರ ಸಂಘಗಳ ಮೇಲ್ವಿಚಾರಕ ನವೀನ್ ಕುಮಾರ್ ಜಿಲ್ಲಾ ಕೇಂದ್ರ ಬ್ಯಾಂಕಿನ ಆರ್ಥಿಕ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೊರೆನೂರು ಸಹಕಾರ ಬ್ಯಾಂಕಿನ ಅಧ್ಯಕ್ಷ ಹೆಚ್.ಟಿ. ದಿನೇಶ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಚಂದ್ರಪ್ಪ, ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕರುಗಳಾದ ಜಗದೀಶ್, ಕೃಷ್ಣೇಗೌಡ, ರಮೇಶ್, ಚಂದ್ರಶೇಖರ್, ವೇದಾವತಿ, ಬ್ಯಾಂಕಿನ ವ್ಯವಸ್ಥಾಪಕ ಜೀವನ್ ಇದ್ದರು.

ಕಾರ್ಯಾಗಾರದಲ್ಲಿ ಸ್ತ್ರೀ ಶಕ್ತಿ ಮತ್ತು ಸ್ವ-ಸಹಾಯ ಗುಂಪುಗಳು ಹಾಗೂ ರೈತ ಒಕ್ಕೂಟದ ಗುಂಪುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.