ನೋಡಲು ಅತಿ ಸರಳ. ಅರ್ಥಮಾಡಿಕೊಳ್ಳಲಾಗದ ಸ್ವಭಾವ, ಸುಂದರ ಮೈಕಟ್ಟು, ಹವ್ಯಾಸ ಹತ್ತಾರು-ಹೆಗ್ಗಳಿಕೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ. ಇದು ದೇಶವಿದೇಶಗಳಲ್ಲಿ ಯೋಗ, ಪ್ರಚಾರ ಮಾಡಿ, ರಷ್ಯಾ ಅಧ್ಯಕ್ಷ ಪುಟಿನ್, ದುಬೈ ರಾಜಕುವರಿ, ಬಾಲಿವುಡ್-ಹಾಲಿವುಡ್ ನಟ-ನಟಿಯರಿಗೆ ಯೋಗಾಭ್ಯಾಸ ತರಬೇತಿ ನೀಡುವ ಭರತ್ ತಾಕೂರ್ ಎಂಬ ಬಹುಮುಖ ಖ್ಯಾತಿಯ ವ್ಯಕ್ತಿಯ ಪರಿಚಯ.
ಇತ್ತೀಚೆಗೆ ಮಡಿಕೇರಿಯ ಶ್ರೀನಾಥ ನಿವಾಸದಲ್ಲಿ ಸೋಹಂ ಮಾರ್ಗದರ್ಶಕ ಶ್ರೀ ಬಿ. ಕೆ. ಸುಬ್ಬಯ್ಯ ಅವರನ್ನು ಭರತ್ ತಾಕೂರ್ ಭೇಟಿ ಆಗಲು ಬಂದಾಗ ‘ಶಕ್ತಿ’ ಅವರನ್ನು ಸಂದರ್ಶಿಸಿತು. ಶ್ರೀ ಬಿ. ಕೆ. ಸುಬ್ಬಯ್ಯ ಅವರಿಂದ ಶಾಲು ಹೊದಿಸಿಕೊಂಡು ಸನ್ಮಾನ ಸ್ವೀಕರಿಸಿದ ಭರತ್ ತಾಕೂರ್, ಬಳಿಯಿದ್ದ ವೈದ್ಯೆ ಒಬ್ಬರಲ್ಲಿ ನಾಡಿಬಡಿತ ಪರಿಶೀಲಿಸಲು ಹೇಳಿದರು. ಬಡಿತವಿತ್ತು, ಕೆಲ ನಿಮಿಷಗಳ ಬಳಿಕ ಬಡಿತ ಸಂಪೂರ್ಣ ಸ್ಥಗಿತವಾಯ್ತು. ಭರತ್ ತಾಕೂರ್ ಅಂತೂ ಮಾತು ಮುಂದುವರಿಸಿದ್ದರು ! ಇದು, ಅವರು ಹಠಯೋಗದಲ್ಲಿ ಸಾಧಿಸಿರುವ ಹಿಡಿತಕ್ಕೊಂದು ಸ್ಯಾಂಪಲ್ ಅಷ್ಟೆ.
ಇವರು ಅಘೋರಿ ಪಂಥದ ಗುರು ಕೂಡ. ಬಿಹಾರದ ಪ್ರಭಾವೀ ಕುಟುಂಬಕ್ಕೆ ಸೇರಿರುವ ಇವರ ತಂದೆ ಇಪ್ಪತ್ತೈದು ಸಾವಿರ ಎಕರೆ ಭೂಮಿಯ ಮಾಲೀಕ. ಆದರೆ, ಮಕ್ಕಳಿರಲಿಲ್ಲ. ಗೋದಾವರಿ ತೀರದಲ್ಲಿ ಇವರ ತಾಯಿ ಗುರು ಸುಖದೇವ್ ಬ್ರಹ್ಮಚಾರಿ ಎಂಬವರನ್ನು ಕಾಣುತ್ತಾರೆ. ‘‘ನಿನಗೆ ನಾಲ್ಕು ಮಕ್ಕಳಾಗುತ್ತವೆ, ಹಿರಿಯ ಮಗನನ್ನು ನನಗೆ ನೀಡು’’ ಎಂದು ಗುರು ಹೇಳುತ್ತಾರೆ. ಗುರುವಾಣಿ ಫಲ ನೀಡುತ್ತದೆ. ನಾಲ್ಕು ಮಕ್ಕಳ ಜನನವಾಗುತ್ತದೆ. ಈ ನಡುವೆ ತಂದೆ-ತಾಯಿ ರಾಜಕೀಯ ಕೊಲೆಗೆ ಬಲಿಯಾಗುತ್ತಾರೆ. ಗುರು ಸುಖದೇವ್ ಬ್ರಹ್ಮಚಾರಿ ಆಗಮಿಸಿ ನಾಲ್ಕು ವರ್ಷದ ಬಾಲಕ ಭರತ್ ತಾಕೂರನ್ನು ಹಿಮಾಲಯಕ್ಕೆ ಕೊಂಡೊಯ್ಯುತ್ತಾರೆ. ಹಿಮಾಲಯದ ಕಡು ವಾತಾವರಣದಲ್ಲಿ ಬೆಳೆದ ಭರತ್ ತಾಕೂರ್‍ಗೆ ಹಿಮಾಲಯದ ವಿವಿಧ ಗುರುಗಳು ಹಿಂದೂ ಧರ್ಮ, ಸೂಫಿಸಂ, ಬುದ್ಧಿಸಂ ತತ್ವಗಳನ್ನು ಬೋಧಿಸುತ್ತಾರೆ. ಬಾಲಕ ಭರತ್ ಎಲ್ಲಾ ಧರ್ಮಗಳ ಗ್ರಂಥಗಳನ್ನು ಲಗುಬಗೆಯಿಂದ ಕಲಿತು ಉಚ್ಛರಿಸುತ್ತಾನೆ. ಜೊತೆಗೆ ಹಠಯೋಗ, ಅಷ್ಟಾಂಗ ಯೋಗ, ಕರ್ಮಯೋಗ, ಕುಂಡಲಿನೀ ಯೋಗಗಳನ್ನು ಗುರು ಸುಖ್‍ದೇವ್ ಬ್ರಹ್ಮಚಾರಿ ಹೇಳಿಕೊಟ್ಟಿದ್ದಾರೆ. ಯೋಗಿಯಾಗಿ ಬೆಳೆದ ಬಾಲಕನನ್ನು ಮತ್ತೆ ನಗರಕ್ಕೆ ಕಳುಹಿಸಿ ಇಲ್ಲಿನ ವಿದ್ಯಾಭ್ಯಾಸವನ್ನೂ ಕೊಡಿಸುತ್ತಾರೆ. ಫಿಸಿಯಾಲಜಿ ಮತ್ತು ಯೋಗ ವಿಷಯದಲ್ಲಿ ಭರತ್ ಷಾ ಪದವಿಗಳಿಸುತ್ತಾರೆ. ಡಾಕ್ಟರೇಟ್ ಕೂಡ ಗಳಿಸುತ್ತಾರೆ.
ಆರ್ಟಿಸ್ಟಿಕ್ ಯೋಗ
ವಿಶ್ವದ ವಿವಿಐಪಿಗಳಿಗೆ ಆರ್ಟಿಸ್ಟಿಕ್ ಯೋಗ ಎಂಬ ಹೆಸರು ಚಿರಪರಿಚಿತ. ಭರತ್ ಷಾ ತಾನು ಕಲಿತ ಎಲ್ಲಾ ವಿದ್ಯೆಗಳನ್ನು ಕೂಡಿಸಿ ಪ್ರಭಾವೀ ಯೋಗಸೂತ್ರ ಅನುಸರಿಸಿ ಯೋಗ ತರಬೇತಿ ಆರಂಭಿಸುತ್ತಾರೆ. ಸಂಸ್ಥೆಗೆ ಆರ್ಟಿಸ್ಟಿಕ್ ಯೋಗ ಎಂದು ಹೆಸರಿಸುತ್ತಾರೆ. ಭಾರತ, ರಷ್ಯಾ, ಯುಕೆ, ಯುಎಸ್‍ಎ, ದುಬೈ, ಸಿಂಗಪುರ್ ಇತ್ಯಾದಿ ದೇಶಗಳಲ್ಲಿ ಎಂಟು ಸಾವಿರಕ್ಕೂ ಹೆಚ್ಚು ಆರ್ಟಿಸ್ಟಿಕ್ ಯೋಗ ಕೇಂದ್ರಗಳು ಇಂದು ಕಾರ್ಯ ನಿರ್ವಹಿಸುತ್ತಿವೆ. ಇಪ್ಪತ್ತು ಸಾವಿರ ಯೋಗ ತರಬೇತುದಾರರನ್ನು ತಯಾರು ಮಾಡಲಾಗಿದೆ.
ಇವರ ಯೋಗ, ಧ್ಯಾನ,ಚಿಂತನೆಗಳನ್ನು ಹೆಸರಾಂತ ಮೈಕೆಲ್ ಡೊಗ್ಲಾಸ್, ಬೋರಿಸ್ ಬೆಕರ್, ಶೇನ್‍ವಾರ್ನೆ, ಸುನಿಲ್ ಭತ್ರಿ, ಮಿಟ್ಟಲ್, ರತನ್ ಟಾಟಾ, ಅನುಷ್ಕಾ ಶಂಕರ್, ಕರೀನಾ ಕಪೂರ್, ಬಿಪಾಶಾ ಬಸು, ಶ್ರೀದೇವಿ, ಸಲ್ಮಾನ್‍ಖಾನ್, ಡೇವಿಡ್ ದಾವನ್ ಮುಂತಾದವರು ಅಭ್ಯಸಿಸುತ್ತಿದ್ದಾರೆ. ದೆಹಲಿ, ಮುಂಬೈ, ಹೈದ್ರಾಬಾದ್, ಬೆಂಗಳೂರಿನಲ್ಲೂ ಯೋಗಾಭ್ಯಾಸ ಕೇಂದ್ರಗಳಿವೆ. ರಷ್ಯಾದಲ್ಲಿ ಒಂದು ಸಾವಿರ ಎಕರೆ ವಿಸ್ತೀರ್ಣದಲ್ಲಿ ಚಟುವಟಿಕೆಗಳು ನಡೆಯುತ್ತವೆ.
ಕೆಲವೊಮ್ಮೆ ನಗು, ಕೆಲವೊಮ್ಮೆ, ಬಿಗು, ಕೆಲವೊಮ್ಮೆ ಒರಟಾಗಿ ವರ್ತಿಸುವ ಈ ಅಘೋರಿ ಗುರು ಭರತ್ ಶಾ ಪಾಶಕ್ಕೆ ಬಾಲಿವುಡ್ ನಟಿ ಭೂಮಿಕಾ ಚಾವ್ಲಾ ಬಿದ್ದಿದ್ದಾಳೆ. ಆಕೆಯೊಡನೆ 2007ರಲ್ಲಿ ಮದುವೆಯಾಗುತ್ತದೆ. ಇವರಿಗೆ ಪುತ್ರನೊಬ್ಬನಿದ್ದು, ಅವನನ್ನು ತಮ್ಮ ಹಾದಿಯಲ್ಲಿ ತಯಾರಿ ಮಾಡುತ್ತಿದ್ದಾರೆ.
ಖಿನ್ನತೆ, ಮಾನಸಿಕ ಒತ್ತಡ, ಧ್ಯಾನಾಭ್ಯಾಸಿಗಳಿಗೆ ಭರತ್ ಶಾ ಶಿಬಿರಗಳನ್ನು ಆಯೋಜಿಸುತ್ತಾರೆ. ಯೋಗ ಗುರುವಿನ ಪಾತ್ರ ಒಂದೆಡೆಯಾದರೆ, ಶಿಷ್ಯರೊಡನೆ ಮತ್ತೊಂದೆಡೆ ಸ್ಮಶಾನಗಳಲ್ಲಿ ಧ್ಯಾನಾಭ್ಯಾಸ ಮಾಡಿಸುತ್ತಾರೆ. ಸಮಯವಿದ್ದಾಗ ಪಿಯಾನೋ ನುಡಿಸುವ ಭರತ್ ಷಾ ಕೆಲವು ಪುಸ್ತಕಗಳನ್ನೂ ಬರೆದಿದ್ದಾರೆ. ಸಮಯದ ಗೋಜಿಗೆ ಹೋಗದ ಇವರು ರಾತ್ರಿ 3-4 ಗಂಟೆಯವರೆಗೆ ಚಿತ್ರ ಬಿಡಿಸುತ್ತಾರೆ. ಕೈಯಲ್ಲಿ ಬರೆದು ಸುಸ್ತಾದರೆ ಇವರು ಪಾದ ಬಳಸಿಯೂ ವರ್ಣ ಚಿತ್ರ ಬರೆಯುತ್ತಿದ್ದು, ಒಂದೊಂದು ಚಿತ್ರ ಎಂಭತ್ತು ಲಕ್ಷದಿಂದ ಕೋಟಿ ರೂಪಾಯಿಗೂ ಆನ್‍ಲೈನಿನಲ್ಲಿ ಮಾರಾಟವಾಗುತ್ತದೆ. ಚಿತ್ರದೊಂದಿಗೆ ಅದರ ಬದಿಯಲ್ಲಿ ಅವರು ಗೂಡಾರ್ಥವುಳ್ಳ ಕವನ ಬರೆಯುವದು ಮತ್ತೂ ಆಕರ್ಷಕ. ಅದರಿಂದ ಚಿತ್ರದ ಬೆಲೆ ದ್ವಿಗುಣಗೊಳ್ಳುತ್ತದೆ.
ಭರತ್ ಶಾ ಹಲವೆಡೆ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಮನೆಯ ಒಂದೆಡೆ ಚಿತ್ರ ಬಿಡಿಸುವವರು, ಮತ್ತೊಂದೆಡೆ ಯೋಗಾಭ್ಯಾಸ ಮಾಡುವವರು, ಇನ್ನೊಂದೆಡೆ ಧ್ಯಾನಾಭ್ಯಾಸ ಮಾಡುವವರು, ಬಾಗಿಲ ಬಳಿ ಇವರನ್ನು ನೋಡಲು ಖಾತರರಾಗಿ ಕಾಯುತ್ತಿರುವವರು ತುಂಬಿರುತ್ತಾರೆ. ಎಲ್ಲರನ್ನೂ, ಎಲ್ಲವನ್ನೂ ನಿಭಾಯಿಸುವ ಇವರು ಅವರೆಲ್ಲರಿಗೂ ಸ್ವತಃ ಅಡುಗೆ ಮಾಡಿ ಬಡಿಸುತ್ತಾರೆ ! ದೇಶ ವಿದೇಶದ ಅಡುಗೆಗಳಲ್ಲೂ ಇವರದು ಎತ್ತಿದ ಕೈ. ಈ ಚಟುವಟಿಕೆ ಗಳೊಂದಿಗೆ 2-3 ಸಾಫ್ಟ್‍ವೇರ್ ಕಂಪೆನಿಗಳನ್ನೂ ಹೊಂದಿರುವ ಭರತ್ ಷಾ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಮುಳುಗಿದ್ದಾರೆ ಅನ್ನಿಸುತ್ತದೆ. ಆದರೆ, ‘‘ಶಕ್ತಿ’’ ಯೊಂದಿಗೆ ಮುಕ್ತವಾಗಿ, ಆತ್ಮೀಯವಾಗಿ ಮಾತನಾಡಿದ ಅವರು ‘‘ಈ ಪ್ರಪಂಚದಲ್ಲೇನಿದೆ ? ಎಲ್ಲಾ ವೇಸ್ಟ್. ಅದಕ್ಕೆ ನಾನು ಆಂತರ್ಯದ ಪ್ರಪಂಚದಲ್ಲೇ ಮುಳುಗಿರುತ್ತೇನೆ’’ ಎಂದು ತಮ್ಮ ನಿಜತ್ವ ಪ್ರದರ್ಶಿಸುತ್ತಾರೆ. ಕೊಡಗಿನಿಂದ ಮರಳುವಾಗ ಸೋಹಂ ಮಾರ್ಗದರ್ಶಕ ಶ್ರೀ ಬಿ. ಕೆ. ಸುಬ್ಬಯ್ಯ ಅವರ ಭೇಟಿಯ ಸವಿನೆನಪಿನೊಂದಿಗೆ, ಇಲ್ಲಿನ ಬೆಲ್ಲ ಕಾಫಿ ಮತ್ತು ಖಾದ್ಯಗಳನ್ನು ತಯಾರಿಸುವದನ್ನೂ ಕೇಳಿ ತಿಳಿದು ಮರಳಿದ್ದಾರೆ.