ಶನಿವಾರಸಂತೆ, ಆ. 1: ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ನಾಗರಿಕರ ಸಲಹಾ ಸಮಿತಿ ಸಭೆ ನಡೆಯಿತು. ಅಧ್ಯಕ್ಷತೆಯನ್ನು ಸೋಮವಾರಪೇಟೆ ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ ವಹಿಸಿ ಮಾತನಾಡಿದರು.

ಖಾಸಗಿ ಪಿಕ್‍ಅಪ್ ವಾಹನದಲ್ಲಿ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರನ್ನು ತುಂಬಿಸಿಕೊಂಡು ರಹದಾರಿ ಇಲ್ಲದೆ ಓಡಿಸುವದನ್ನು ನಿರ್ಧಾಕ್ಷಿಣ್ಯವಾಗಿ ತಡೆದು ಕ್ರಮಕೈಗೊಳ್ಳಬೇಕಾಗುತ್ತದೆ. ಸಾರ್ವಜನಿಕರು ಸಹಕರಿಸಿ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಗಾಯಗೊಂಡರೆ ಅಪಘಾತಪಡಿಸಿ ಓಡಿ ಹೋಗುವದರ ಬದಲು ಅವರಿಗೆ ಸಹಾಯ ಹಸ್ತ ನೀಡಿ, ಕಾನೂನನ್ನು ಗೌರವಿಸಿ ಎಂದರು.

ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಎಂ.ಹೆಚ್. ಮರಿಸ್ವಾಮಿ ಅವರು ಮಾತನಾಡಿ, ಸಾರ್ವಜನಿಕರು ರಸ್ತೆ ಸುರಕ್ಷಾ ಸಂಚಾರಕ್ಕೆ ದಾನಿಗಳು ಬ್ಯಾರಿಕೇಟ್‍ಗಳನ್ನು ಒದಗಿಸಿಕೊಡು ವಂತೆ ವಿನಂತಿಸಿ, ಕಾನೂನಿಗೆ ಎಲ್ಲರೂ ಒಂದೇ. ಸಾರ್ವಜನಿಕರು ಸಹಕರಿಸುವಂತೆ ಕೋರಿದರು.

ಶನಿವಾರಸಂತೆಯ ಕೆಲವು ಮದ್ಯದಂಗಡಿ, ಬಾರ್‍ಗಳು ಸಮಯ ಮೀರಿ ತೆರೆದಿರುವದನ್ನು ಖಂಡಿಸಲಾ ಯಿತು. ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು. ಗುಡುಗಳಲೆ ಜಂಕ್ಷನ್‍ನಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಗುಡುಗಳಲೆ ಜಾತ್ರಾ ಬಾಣೆಯಲ್ಲಿ ಕೆಲವರು ವಾಹನಗಳನ್ನು ನಿಲ್ಲಿಸಿ ಕೊಂಡು ಪ್ರತಿದಿನ ಮದ್ಯಪಾನ, ಗಲಾಟೆ, ಅದೇ ರೀತಿ ಕೆಲವು ಹೊಟೇಲ್‍ಗಳಲ್ಲಿ ಕಾಲೇಜು ವಿದ್ಯಾರ್ಥಿ ಗಳು ಮದ್ಯಪಾನ ಮಾಡಿ ಕಾಲಹರಣ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸಭೆಯಲ್ಲಿ ಪೊಲೀಸರ ಗಮನಕ್ಕೆ ತರಲಾಯಿತು.

ಸಭೆಯಲ್ಲಿ ತಾ.ಪಂ. ಸದಸ್ಯರು ಗಳಾದ ಬಿ.ಎಸ್. ಅನಂತಕುಮಾರ್, ಕುಶಾಲಪ್ಪ, ಗ್ರಾ.ಪಂ. ಅಧ್ಯಕ್ಷರುಗಳಾದ ಸಿ.ಜೆ. ಗಿರೀಶ್, ಸಂದೀಪ್, ಕೆ.ಎಂ. ಮುಸ್ತಾಫ, ಸದಸ್ಯ ಸರ್ದಾರ್ ಅಹಮ್ಮದ್, ಪಿಡಿಓ ಜಿ.ಪಿ. ಕುಶಾಲಪ್ಪ, ಪ್ರತಿಮಾ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಧರ್ಮಪ್ಪ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ರಕ್ಷಣಾ ವೇದಿಕೆಯ ಫ್ರಾನ್ಸಿಸ್, ಕುಮಾರ್, ವಾಣಿಜ್ಯ ಸಂಘದ ಅಧ್ಯಕ್ಷ ಪ್ರತಾಪ್, ವಾಹನ ಚಾಲಕರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಪ್ರಮುಖರಾದ ಎಸ್.ಎನ್. ರಘು, ಟಿ.ಪಿ. ಸುರೇಶ್, ಎನ್.ಎಸ್. ದಿವಾಕರ, ಉಮೇಶ್ ಇತರರು ಭಾಗವಹಿಸಿದ್ದರು. ಎ.ಎಸ್.ಐ. ಖತೀಜಾ, ಸಿಬ್ಬಂದಿಗಳಾದ ರಮೇಶ್, ವಿಶ್ವ, ಸಂತೋಷ್, ಶಶಿ, ಸವಿತಾ, ರಾಧ, ವಿವೇಕ್ ಇತರರಿದ್ದರು.